ಲಂಡನ್: ಅಮೆರಿಕ (USA) ಮತ್ತು ಇರಾನ್(Iran) ಪರಸ್ಪರ ಕ್ಷಿಪಣಿ ಹಾಗೂ ವಾಯುದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಶೇ. 4 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದೆ.
ಜಾಗತಿಕ ಇಂಧನ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಭದ್ರತೆಯ ಬಗ್ಗೆ ಆತಂಕ ಎದುರಾಗಿರುವುದೇ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 4.28 ರಷ್ಟು ಹೆಚ್ಚಾಗಿ ಬ್ಯಾರೆಲ್‌ಗೆ 79.26 ಡಾಲರ್(7,570 ರೂ.) ತಲುಪಿದ್ದರೆ, ಡಬ್ಲ್ಯುಟಿಐ (WTI) ಕಚ್ಚಾ ತೈಲದ ಬೆಲೆ ಶೇ. 4.37 ರಷ್ಟು ಏರಿಕೆಯಾಗಿ 74.53 ಡಾಲರ್(7,125 ರೂ.) ತಲುಪಿದೆ.
ಇರಾನ್ ವಾರಾಂತ್ಯದಲ್ಲಿ ತನ್ನ ದಾಳಿಯ ವ್ಯಾಪ್ತಿಯನ್ನು ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳಿಗೂ ವಿಸ್ತರಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಿದೆ.
ನಿಯಮ ಉಲ್ಲಂಘಿಸಿ ಚಲಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಬೆನ್ನಲ್ಲೇ, ಇರಾನ್ ಈ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿತ್ತು. ಕೆಪ್ಲರ್ (Kpler) ಸಂಸ್ಥೆಯ ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಭಾನುವಾರ ಈ ಜಲಸಂಧಿಯ ಮೂಲಕ ಕೇವಲ 6 ಹಡಗುಗಳು ಮಾತ್ರ ಹಾದುಹೋಗಿವೆ. ಇದು ಕಳೆದ ಐದು ವಾರಗಳಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಇದನ್ನೂ ಓದಿ: ಕುವೈತ್, ಬಹರೇನ್ ಮೇಲೆ ಮತ್ತೆ ದಾಳಿ – ಜಲಮಾರ್ಗ ಬಂದ್ ಎಂದ ಇರಾನ್
ಇರಾನ್ ವಿದೇಶಾಂಗ ಸಚಿವಾಲಯವು ಅಮೆರಿಕದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದು ವಿಶ್ವಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ. ಅಲ್ಲದೆ ಯಾವ ದೇಶಗಳು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ತನ್ನ ಭೂಮಿ ಅಥವಾ ಮಿಲಿಟರಿ ನೆಲೆಗಳನ್ನು ಬಳಸಲು ಅವಕಾಶ ನೀಡುತ್ತವೆಯೋ, ಆ ದೇಶಗಳನ್ನು ಇರಾನ್ ಸೇನೆಯು ಶತ್ರು ದೇಶ ಎಂದು ಪರಿಗಣಿಸಿ ದಾಳಿ ನಡೆಸಲಿದೆ ಎಂದು ಕಠಿಣ ಎಚ್ಚರಿಕೆ ನೀಡಿದೆ.
