ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಮಳೆ ಅಬ್ಬರಿಸುತ್ತಿದ್ರೆ, ಮತ್ತಷ್ಟು ಜಿಲ್ಲೆಗಳ ರೈತರು ಮಳೆರಾಯನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಮಳೆ ಬೀಳದಿದ್ರೆ ಮನುಷ್ಯರಿಗಷ್ಟೇ ಅಲ್ಲ ಕಾಡು ಪ್ರಾಣಿಗಳಿಗೂ ಕೂಡ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ. ಮಧ್ಯಕರ್ನಾಟಕ ಭಾಗದಲ್ಲಂತೂ ಬೆಳೆಗಳಿಗೆ ನೀರಿಲ್ಲದೆ ಸಂಪೂರ್ಣ ನೆಲಕಚ್ಚಿವೆ. ಸಾಂಪ್ರದಾಯಿಕ ಬೆಳೆಗಳನ್ನೇ ನಂಬಿದ್ದ ಅನ್ನದಾತರು ಕಂಗಾಲಾಗಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅನ್ನೋದು ಮರೀಚಿಕೆ ಆಗಿದೆ. ಇದರಿಂದ ಚಾಮರಾಜನಗರ (Chanarajanagar) ಜಿಲ್ಲೆಯ ಹನೂರು (Hanur) ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಜೀವಿಗಳಿಗೆ ಕುಡಿಯುವುದಕ್ಕೂ ನೀರಿಲ್ಲದ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿಯೂ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವವಿತ್ತು. ಪ್ರಾಣಿಗಳಿಗೆ ನೀರುಣಿಸಲು ಅಧಿಕಾರಿಗಳು ಸಣ್ಣ ಸಣ್ಣ ಪ್ರಮಾಣದ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿದ್ದರು. ಈಗ ಆ ಟ್ಯಾಂಕ್‌ಗಳಲ್ಲೂ ನೀರಿನ ಪ್ರಮಾಣ ತಗ್ಗಿದೆ. ಮಳೆ ಬೀಳದಿದ್ರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಚೀನಾ-ಪಾಕ್ ‘ಜಲ’ ಪವರ್‌ಗೆ ಭಾರತ ಕೌಂಟರ್; ಏನಿದು ಭಾರತೀಯ ನೌಕಾಪಡೆಯ ಸೋನಾರ್ ಪ್ಲ್ಯಾನ್?

ಇನ್ನೂ ಮಲೆ ಮಹದೇಶ್ವರ ವನ್ಯಧಾಮಲ್ಲಿ ಕಳೆದ ಮೇನಲ್ಲಿ ಸ್ವಲ್ಪ ಪ್ರಮಾಣದ ಮಳೆ ಬಿದ್ದಿದೆ. ಈ ಮಳೆಯಿಂದ ಒಂದಷ್ಟು ಕೆರೆಗಳು ಕಾಲು ಭಾಗ ಭರ್ತಿಯಾಗಿವೆಯಷ್ಟೇ, ಇನ್ನುಳಿದ ಕೆರೆಗಳು ಸಂಪೂರ್ಣ ಖಾಲಿಯಾಗಿವೆ.

ಮಳೆಗಾಗಿ ಕಾದ ರೈತರ ಕಣ್ಣಲ್ಲಿ ನೀರು:
ಕೋಟೆನಾಡು ಚಿತ್ರದುರ್ಗದಲ್ಲಿ ಸೂರ್ಯಕಾಂತಿ ಬಿತ್ತನೆಗೂ ಮುನ್ನ ಉತ್ತಮ ಮಳೆಯಾಗಿದ್ದು, ಕಳೆದ ಎರಡು ತಿಂಗಳಿಂದ ಒಂದುಹನಿ ಮಳೆ ಸಹ ಭೂಮಿಗೆ ಬಿದ್ದಿಲ್ಲ. ಅದ್ರಲ್ಲೂ ಚಿತ್ರದುರ್ಗ (Chitradurga) ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ರೈತರಿಗೆ ಆಘಾತ ಎದುರಾಗಿದೆ. ಮಳೆಯಾಶ್ರಿತ ಸಾಂಪ್ರದಾಯಿಕ ಬೆಳೆ ತೊಗರಿ ಹಾಗೂ ಮೆಕ್ಕೆಜೋಳ ಬಾಡಿ ಬೆಂಡಾಗಿವೆ. ಹೀಗಾಗಿ ಎಕರೆಗೆ 50-60 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳು ಫಲಕೊಡುವ ಮುನ್ನವೇ ಕಮರಿ ಹೋಗಿರೋದು ರೈತರಲ್ಲಿ ಬರಸಿಡಿಲು ಆವರಿಸಿದೆ.ಇದನ್ನೂ ಓದಿ: ಬ್ಯಾಂಕಾಕ್‌ನ ಪಬ್‌ನಲ್ಲಿ ಭಾರೀ ಅಗ್ನಿ ಅವಘಡ – 27 ಮಂದಿ ಸಜೀವ ದಹನ, 63 ಜನರಿಗೆ ಗಾಯ
ಇನ್ನು, ಸಕಾಲಕ್ಕೆ ಮಳೆಯಾಗಿದ್ರೆ ಸೂರ್ಯಕಾಂತಿ ಬೆಳೆದು, ಲಾಭ ಬರದಿದ್ದರೂ ಹಾಕಿದ ಬಂಡವಾಳವಾದ್ರೂ ವಾಪಾಸ್ ಬರುವ ನಿರೀಕ್ಷೆ ಇತ್ತು. ಆದ್ರೆ ವರುಣ ಸಂಪೂರ್ಣ ಮುನಿದ ಹಿನ್ನೆಲೆ ಅನ್ನದಾತರ ಕಣ್ಣಲ್ಲಿ ನೀರು ಬರುವಂತಾಗಿದೆ. ಮಳೆರಾಯನ ಜಪದಲ್ಲಿ ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ಬಿತ್ತನೆಗಾಗಿ ಕೈನಲ್ಲಿದ್ದ ಕಾಸನ್ನು ಕಳೆದುಕೊಂಡು ಕಂಗಾಲಾಗಿರುವ ರೈತರು ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ವಿಜಯಪುರ (Vijayapura) ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದೆ. ಜೂನ್ ಮೊದಲನೇ ವಾರದಲ್ಲಿ ಅಲ್ಪಸ್ವಲ್ಪ ಮಳೆಯಾದ ತಕ್ಷಣ ಜಿಲ್ಲೆಯಲ್ಲಿ 20% ರೈತರು ಬಿತ್ತನೆ ಮಾಡಿದ್ರು. ಇನ್ನುಳಿದ ರೈತರು ಇನ್ನೊಂದು ಮಳೆಗೆ ಎದುರು ನೋಡುತ್ತಿದ್ರು. ಬಿತ್ತನೆಗಾಗಿ ಸಾಲ ಮಾಡಿ ಗೊಬ್ಬರ, ಬಿತ್ತನೆ ಬೀಜ ಸಂಗ್ರಹಿಸಿದ್ದರು. ಆದ್ರೆ ಜುಲೈ ಬಂದ್ರೂ ಮಳೆ ಬಾರದ ಕಾರಣ ರೈತರು ಕಂಗಾಲಾಗಿದ್ದಾರೆ.ಇದನ್ನೂ ಓದಿ: ಮದುವೆಯಾದ ನಾಲ್ಕೇ ತಿಂಗಳಿಗೆ ನವವಿವಾಹಿತೆ ನೇಣಿಗೆ ಶರಣು
ಇತ್ತ, ಕೊಡಗಿನಲ್ಲಿ ವಾರದಿಂದ ಸುರಿದ ಮಳೆ ಕೊಂಚ ವಿರಾಮ ಸಿಕ್ಕಿದೆ. ಆದರೆ ಮಳೆ ಅವಾಂತರ ಮಾತ್ರ ಇನ್ನೂ ನಿಂತಿಲ್ಲ. ಭಾಗಮಂಡಲ ಹಾಗೂ ಚೆಟ್ಟಿಮಾನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ಲದೆ ಜನರು ಕತ್ತಲೆಯಲ್ಲೇ ದಿನ ಕಳೆಯುತ್ತಿದ್ದಾರೆ. ಭಾರೀ ಗಾಳಿ ಮಳೆಗೆ ಭಾಗಮಂಡಲ, ಚೆಟ್ಟಿಮಾನಿ ಭಾಗದಲ್ಲಿ 16ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರು ಕಳೆದ ಒಂದು ವಾರದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಒಟ್ಟಾರೆ, ಒಂದೆಡೆ ಮಳೆ ಅಬ್ಬರಿಸುತ್ತಿದ್ರೆ, ಮತ್ತೊಂದೆಡೆ ಅನ್ನದಾತರು ಮಳೆಗಾಗಿ ಪ್ರಾರ್ಥನೆ ಮಾಡ್ತಿದ್ದಾರೆ.ಇದನ್ನೂ ಓದಿ: ಪತಿ, ನಾದಿನಿಯನ್ನು ಸುಮ್ಮನೆ ಬಿಡಬೇಡ – ಮದುವೆಯಾದ ನಾಲ್ಕೇ ತಿಂಗಳಿಗೆ ಶಿಕ್ಷಕಿ ಆತ್ಮಹತ್ಯೆ
