ChikkamagaluruDistrictsKarnatakaLatestMain Post

ದತ್ತಪೀಠ ಮಾರ್ಗದಲ್ಲಿ ಬೃಹತ್ ಆಂಜನೇಯನ ಏಕಶಿಲಾ ಮೂರ್ತಿ ಸ್ಥಾಪನೆ!

ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿದೆ.

ಪಶ್ಚಿಮಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಎಂಬ ಸ್ಥಳದಲ್ಲಿರುವ ಆಂಜನೇಯನ ಗುಡಿ ಬಳಿಯೇ ಈ 21 ಅಡಿ ಎತ್ತರದ ಆಂಜನೇಯ ನೆಲೆ ನಿಲ್ಲಲಿದ್ದಾನೆ. ಈಗಾಗಲೇ ಮೂರ್ತಿ ಕೆತ್ತನೆಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆ ಕಲ್ಲುಗಳು ಕೂಡ ನಗರಕ್ಕೆ ಆಗಮಿಸಿವೆ.

ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಕಲ್ಲುಗಳಿಗೆ ಪೂಜೆ ಮಾಡಿ ಪುರ ಪ್ರವೇಶ ಮಾಡಿಕೊಳ್ಳಲಿದ್ದಾರೆ. ಕಲ್ಲಿನ ಜೊತೆ ಶಿಲ್ಪಿಗಳೂ ಕೂಡ ಆಗಮಿಸಿದ್ದಾರೆ. ಮೂರ್ತಿಯನ್ನ ಪ್ರತಿಷ್ಠಾಪಿಸುವ ಜಾಗದಲ್ಲೇ ಕೆತ್ತನೇ ಮಾಡಬೇಕೋ ಅಥವಾ ಬೇರೇಡೆ ಕೆತ್ತನೆ ಮಾಡಿ ಅಲ್ಲಿಗೆ ಕೊಂಡೊಯ್ದು ಪ್ರತಿಷ್ಠಾಪಿಸಬೇಕೋ ಎಂಬ ಚರ್ಚೆಗಳು ನಡೆಯುತ್ತಿವೆ.

ಮುಳ್ಳಯ್ಯನಗಿರಿ ತಪ್ಪಲಿನ ರಸ್ತೆಗಳು ಅತ್ಯಂತ ಚಿಕ್ಕದಾಗಿರುವುದರಿಂದ ಅಷ್ಟು ದೊಡ್ಡ ಕಲ್ಲನ್ನು ಹೊತ್ತ ಲಾರಿ ಈ ಮಾರ್ಗದಲ್ಲಿ ಸಂಚರಿಸುತ್ತಾ ಎಂಬ ಅನುಮಾನದೊಂದಿಗೆ ಲಾರಿ ಚಾಲಕ ಹೋಗಿ ಮಾರ್ಗವನ್ನೂ ಕೂಡ ನೋಡಿ ಬಂದಿದ್ದಾರೆ. ಈ ಮೂರ್ತಿ ಕವಿಕಲ್‍ಗಂಡಿ ಬಳಿ ನೆಲೆ ನಿಂತರೆ ಸುತ್ತಮುತ್ತಲಿನ ಸುಮಾರು 25-30 ಕಿ.ಮೀ. ದೂರಕ್ಕೂ ಈ ಮೂರ್ತಿ ಕಾಣುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಇಂದು ಒಂದೇ ದಿನ 155 ರೈಲು ಕ್ಯಾನ್ಸಲ್ – ಯಾವೆಲ್ಲ ರೈಲುಗಳಿಲ್ಲ ಫುಲ್‌ ಲಿಸ್ಟ್‌

ಈಗಾಗಲೇ ಸಾವಿರಾರು ಭಕ್ತರು ದತ್ತಪೀಠಕ್ಕೆ ಬಂದು ಪ್ರಕೃತಿ ಮಧ್ಯೆ ನೆಲೆಸಿರುವ ದತ್ತಾತ್ತೇಯರ ದರ್ಶನ ಮಾಡುತ್ತಿದ್ದಾರೆ. ಈ ಮೂರ್ತಿ ನೆಲೆ ನಿಂತರೇ ಕಾಫಿನಾಡು ದೇಶದ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶಾದ್ಯಂತ ಇರೋ ಲಕ್ಷಾಂತರ ಆಂಜನೇಯ ಭಕ್ತರು ಕಾಫಿನಾಡ ಪ್ರಕೃತಿ ಸೌಂದರ್ಯದ ಆಂಜನೇಯ ದರ್ಶನವನ್ನೂ ಪಡೆಯಲಿದ್ದಾರೆ. ಆಂಜನೇಯ ಸಂಜೀವಿನಿಗಾಗಿ ಪರ್ವತವನ್ನ ಹೊತ್ತೊಯ್ಯುವಾಗ ತುಂಡಾಗಿ ಬಿದ್ದ ಭಾಗವೇ ಚಂದ್ರದ್ರೋಣ ಪರ್ವತಗಳ ಸಾಲು ಎಂಬ ನಂಬಿಕೆ ಭಕ್ತರಲ್ಲಿದೆ.

ಇದೇ ಡಿಸೆಂಬರ್ ಎರಡನೇ ವಾರದಲ್ಲಿ ತಾಲೂಕಿನ ದತ್ತಪೀಠದಲ್ಲಿ ಮೂರು ದಿನಗಳ ಕಾಲ ದತ್ತಜಯಂತಿ ಕಾರ್ಯಕ್ರಮ ನಡೆಯಲಿದೆ. ಈ ವೇಳೆಗೆ 21 ಅಡಿಯ ಬೃಹತ್ ಪರ್ವತಾಂಜನೇಯನ ಮೂರ್ತಿ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ, ಮುಗಿಲೆತ್ತರದ ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರಕೃತಿಯ ಮಡಿಲಲ್ಲಿ ನೆಲೆ ನಿಲ್ಲುವ ಸಾಧ್ಯತೆ ಇದೆ. ಇದನ್ನೂ ಓದಿ: ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

Live Tv

Leave a Reply

Your email address will not be published.

Back to top button