– ಅಭಿಜಿತ್ ದೀಪ್ಕೆ ಬೆಂಬಲಕ್ಕೆ ಜನರ ದಂಡು
ನವದೆಹಲಿ: ನೀಟ್ ಪರೀಕ್ಷೆ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ದೆಹಲಿಯ ಜಂತರ್‌ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ಆರಂಭಿಸಿದೆ.
ಪ್ರತಿಭಟನೆಯ ಮುಂದಾಳತ್ವ ವಹಿಸಲು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗೂ ಪಾರ್ಟಿಯ ಮುಖ್ಯಸ್ಥ ಅಭಿಜಿತ್ ದೀಪ್ಕೆ ಮುಂಜಾನೆ ದೆಹಲಿಗೆ (Delhi) ಆಗಮಿಸಿದರು. ಭಾರತಕ್ಕೆ ಹೊರಡುವ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, ನಾನು ಭಾರತಕ್ಕೆ ಮರಳುತ್ತಿದ್ದೇನೆ. ನನ್ನ ಭವಿಷ್ಯವನ್ನು ದೇಶದ ಸಂವಿಧಾನದ ಕೈಗೆ ಒಪ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: NEET UG ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ
ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೂಡ ಭಾಗವಹಿಸಿದ್ದಾರೆ. ಅವರು ಪ್ರತಿಭಟನೆಗೆ ಆಗಮಿಸುತ್ತಿದ್ದಂತೆ ಪ್ರತಿಭಟನೆ ತೀವ್ರ ಕಾವು ಪಡೆದುಕೊಂಡಿದೆ.

ತಮ್ಮನ್ನು ಬಂಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ದೀಪ್ಕೆ, ತಾವು ಶಾಶ್ವತವಾಗಿ ಭಾರತಕ್ಕೆ ಮರಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಯಸಿದರೆ ಅದಕ್ಕೆ ಸಿದ್ಧರಾಗಿರುವುದಾಗಿ ಅವರು ಹೇಳಿದ್ದರು. ಭಾರತದ ಸಂವಿಧಾನ ತಮಗೆ ನೀಡಿರುವ ಮೂಲಭೂತ ಹಕ್ಕನ್ನು ಚಲಾಯಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಧ್ವನಿಯನ್ನು ಎತ್ತಿಹಿಡಿಯಲು ದೇಶಕ್ಕೆ ಮರಳುತ್ತಿದ್ದೇನೆ. ಈ ಚಳವಳಿಯನ್ನು ಶಾಂತಿ ಮತ್ತು ಪ್ರೀತಿಯಿಂದ ಮುನ್ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.
ವಿಡಿಯೋ ಸಂದೇಶದಲ್ಲಿ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಅಭಿಜಿತ್ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: NEET UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ – ಎನ್‌ಟಿಎ ಎಕ್ಸ್‌ಪರ್ಟ್ ಬಂಧನ
ಬಿಗಿ ಪೊಲೀಸ್ ಭದ್ರತೆ
ಪ್ರತಿಭಟನೆಯಿಂದ ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು ಜಂತರ್ ಮಂತರ್ ಸುತ್ತಮುತ್ತ ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. 40 ಅರೆಸೈನಿಕ ಪಡೆಗಳು (ಪ್ಯಾರಾ ಮಿಲಿಟರಿ), ಉಪಪೊಲೀಸ್ ಆಯುಕ್ತರು ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಪೊಲೀಸರು ಆಟೋ ಚಾಲಕರ ಮೇಲೂ ಕಣ್ಣಿಟ್ಟಿದ್ದಾರೆ. ಉಬರ್, ಓಲಾ ಸೇರಿದಂತೆ ಇನ್ನಿತರ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್ ಮೇಲೂ ಕೂಡ ನಿಗಾ ವಹಿಸಿದ್ದು, ಆಟೋ ಬಾಡಿಗೆಗಾಗಿ ದುಬಾರಿ ಮೊತ್ತ ಪಡೆಯುವುದಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸೋಶಿಯಲ್ ಮೀಡಿಯಾದ ಮೇಲೂ ಸಹ ಗಮನ ಹರಿಸುತ್ತಿದ್ದಾರೆ.
ಈ ನಡುವೆ ಅಭಿಜಿತ್ ದೀಪ್ಕೆ ತಮ್ಮ ಕಾರನ್ನು ಜಂತರ್ ಮಂತರ್‌ನಲ್ಲಿ ವಿವಿಐಪಿಗಳು ಪಾರ್ಕ್ ಮಾಡುವ ಸ್ಥಳದಲ್ಲಿ ಅನುಮತಿ ಕೇಳಿದ್ದರು. ಆದರೆ ಪೊಲೀಸರು ಇದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆಗೆ ಕಾರಣವೇನು?
ನೀಟ್, ಸಿಬಿಎಸ್‌ಇ ಹಾಗೂ ಸಿಯುಇಟಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಿಜೆಪಿ ಪ್ರತಿಭಟನೆ ಮೂಲಕ ಆಗ್ರಹಿಸುತ್ತಿದೆ. ಈ ಪ್ರತಿಭಟನೆಯನ್ನು ಸಿಜೆಪಿ ಶಾಂತಿಯುತ ಮತ್ತು ಸಾಂವಿಧಾನಿಕ ಚಳುವಳಿ ಎಂದು ಬಣ್ಣಿಸಿದೆ.
ಸೋನಮ್ ವಾಂಗ್ಚುಕ್ ಬೆಂಬಲ
ಸಿಜೆಪಿಗೆ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಅವರಿಂದಲೂ ಬೆಂಬಲ ಸಿಕ್ಕಿದೆ. ಈ ಪ್ರತಿಭಟನೆ ನಡೆಸಿದ್ದಕ್ಕಾಗಿ ದೀಪ್ಕೆಯನ್ನು ಬಂಧಿಸಿದರೆ 6 ವಾರಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ್ದಾರೆ. ಅನುಮತಿಗಾಗಿ ಇನ್ನು ಮುಂದೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ. ನಾವು ಈಗ ನೇರವಾಗಿ ಜಂತರ್ ಮಂತರ್‌ನಲ್ಲಿ ಸೇರಬಹುದು. ಕಾಕ್ರೋಚ್ ಆ ರಹೇ ಹೈ, ಧರ್ಮೇಂದ್ರ ಪ್ರಧಾನ್ ಜಾ ರಹೇ ಹೈ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸೋನಮ್ ವಾಂಗ್ಚುಕ್ ಪೋಸ್ಟ್ ಹಂಚಿಕೊಂಡಿದ್ದಾರೆ
