ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Staduim) ಜು.19ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದ ಬಳಿಕ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ವದಂತಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ರೋಹಿತ್ ಶರ್ಮಾ ಅವರು ತಮ್ಮ ನಿವೃತ್ತಿ ಕುರಿತು ಇನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ತಂಡದ ಮ್ಯಾನೇಜ್‌ಮೆಂಟ್ ಅಥವಾ ಆಯ್ಕೆ ಸಮಿತಿಗೆ (Team India Selectors) ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, 2027ರ ಏಕದಿನ ವಿಶ್ವಕಪ್ (2027 World Cup) ಪ್ಲ್ಯಾನಿಂಗ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಪರಿಗಣಿಸುತ್ತಿಲ್ಲ ಎಂಬ ವಿಷಯವನ್ನು ಆಯ್ಕೆ ಸಮಿತಿ ಈಗಾಗಲೇ ಅವರಿಗೆ ತಿಳಿಸಿದೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ತಂಡದ ಆಡಳಿತ ಮತ್ತು ಆಯ್ಕೆ ಸಮಿತಿ ಮುಂದಿನ ಯೋಜನೆ ರೂಪಿಸುತ್ತಿದೆ.
ಈ ಕುರಿತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಜೊತೆ ಚರ್ಚೆ ನಡೆದಿತ್ತು ಎಂದು ವರದಿಗಳು ಹೇಳಿವೆ. ಆದರೆ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಕ್ರಮವಾಗಿ 11 ಮತ್ತು 26 ರನ್ ಗಳಿಸಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದರಿಂದ ಜುಲೈ 19ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯವೇ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವಾಗಬಹುದು ಎಂಬ ಊಹಾಪೋಹಗಳು ಜೋರಾಗಿವೆ.

ವರದಿ ಪ್ರಕಾರ, ರೋಹಿತ್ ಶರ್ಮಾ ಅವರು ನಿವೃತ್ತಿ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ಬಿಸಿಸಿಐ, ಆಯ್ಕೆ ಸಮಿತಿ ಅಥವಾ ತಂಡದ ಆಡಳಿತ ಮಂಡಳಿಗೆ ತಿಳಿಸಿಲ್ಲ. ಹೀಗಾಗಿ ಅವರು 3ನೇ ಏಕದಿನ ಪಂದ್ಯದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ ಎನ್ನಲಾಗಿದೆ.
