ಮುಂಬೈ: 2 ವರ್ಷದ ಪ್ರೀತಿಯ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಜು.5ರಂದು ಗೌರಿ ಜೊತೆ ಮದುವೆಯಾಗುತ್ತಿರುವುದು ನಿಜ ಎಂದು ಬಾಲಿವುಡ್ ಸ್ಟಾರ್ ಆಮೀರ್ ಖಾನ್ (Aamir Khan) ಸ್ಪಷ್ಟನೆ ಕೊಟ್ಟಿದ್ದಾರೆ.
ನಿನ್ನೆಯಷ್ಟೇ (ಜೂ.3) ಆಮೀರ್ ಖಾನ್ ಪ್ರೇಯಸಿ ಗೌರಿ ಜೊತೆ ಮದುವೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಆಮೀರ್ ಖಾನ್, ಹೌದು, 2 ವರ್ಷಗಳ ಪ್ರೀತಿಯ ಬಳಿಕ ಜು.5ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಗೌರಿ ಜೊತೆ ಮದುವೆಯಾಗುತ್ತಿರುವ ಸುದ್ದಿ ನಿಜ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ

ಆಮೀರ್ ಮತ್ತು ಗೌರಿ ಯಾವುದೇ ರೀತಿಯ ತೋರ್ಪಡಿಕೆಯಿಲ್ಲದಂತೆ ಅತ್ಯಂತ ಖಾಸಗಿಯಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಇಬ್ಬರು ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಜೀವನವನ್ನು ಅನಗತ್ಯ ಪ್ರಚಾರದಿಂದ ದೂರವಿಡಲು ನಿರ್ಧರಿಸಿದ್ದಾರೆ. ಯಾವುದೇ ಅದ್ದೂರಿ ರಿಸೆಪ್ಷನ್ ಅಥವಾ ಇನ್ನಿತರ ಪಾರ್ಟಿಗಳ ಬದಲಾಗಿ, ಕೇವಲ ತಮ್ಮ ಆಪ್ತರೊಂದಿಗೆ ವಿಶೇಷ ದಿನವನ್ನು ಕಳೆಯಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಪ್ರೇಯಸಿ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಸದ್ಯ ಗೌರಿ ಅವರ ಜೊತೆ ಮೂರನೇ ಮದುವೆ ಆಗುತ್ತಿದ್ದಾರೆ. ಇದಕ್ಕೂ ಮುನ್ನ ಆಮೀರ್ ಖಾನ್ 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು. ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನದ ಬಳಿಕ 2002ರಲ್ಲಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಲಗಾನ್ ಚಿತ್ರದ ಸಹ-ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಬಳಿಕ ಇವರಿಬ್ಬರು 2021ರಲ್ಲಿ ಬೇರ್ಪಟ್ಟರು. ದಂಪತಿಗೆ ಸರೋಗೆಸಿ ಮೂಲಕ ಜನಿಸಿದ ಆಜಾದ್ ಎಂಬ ಮಗನಿದ್ದಾನೆ.ಇದನ್ನೂ ಓದಿ:ಗರ್ಲ್‌ಫ್ರೆಂಡ್, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್ ಖಾನ್

ಯಾರಿದು ಗೌರಿ ಸ್ಪ್ರ್ಯಾಟ್?
ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ತಮ್ಮ ಜೀವನದ ಬಹುಭಾಗವನ್ನು ಸಿಲಿಕಾನ್ ಸಿಟಿಯಲ್ಲೇ ಕಳೆದಿದ್ದಾರೆ. ಇವರು ಬೆಂಗಳೂರಿನಲ್ಲಿ ಸಲೂನ್ ನಡೆಸುತ್ತಿದ್ದ ರೀಟಾ ಸ್ಪ್ರ್ಯಾಟ್ ಅವರ ಪುತ್ರಿ. 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್ನಲ್ಲಿ ಫ್ಯಾಶನ್ ಕೋರ್ಸ್ ಪೂರ್ಣಗೊಳಿಸಿದ್ದು, ಸದ್ಯ ಅವರ ಲಿಂಕ್ಡಿನ್ ಪ್ರೊಫೈಲ್ ಪ್ರಕಾರ, ಮುಂಬೈನಲ್ಲಿ ಸಲೂನ್ ನಡೆಸುತ್ತಿದ್ದಾರೆ. ಇವರಿಗೆ 7 ವರ್ಷದ ಮಗುವಿದೆ ಎಂದು ಮೂಲಗಳು ತಿಳಿಸಿವೆ.
ಆಮೀರ್ ಖಾನ್ ತಾವಾಗಿಯೇ ಪರಿಚಯಿಸುವುದಕ್ಕೂ ಮುನ್ನ ತಮ್ಮ ಪ್ರೀತಿಯನ್ನು ಬರೋಬ್ಬರಿ 18 ತಿಂಗಳುಗಳ ಕಾಲ ಗೌಪ್ಯವಾಗಿಟ್ಟಿದ್ದರು. ಯಾರಿಗೂ ಗೊತ್ತಾಗದಂತೆ ಗೌರಿ ಅವರನ್ನು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರು.

ಅದಾದ ಬಳಿಕ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಆಮೀರ್ ಖಾನ್, ನನ್ನ ಜೀವನಕ್ಕೆ ಗೌರಿ ಬಂದಾಗಿನಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ಕಿರಣ್ ಮತ್ತು ರೀನಾ ಅವರೊಂದಿಗಿನ ನನ್ನ ಸಂಬಂಧ ಕೂಡ ತುಂಬಾ ಆಳವಾಗಿತ್ತು, ಆದರೆ ಕೆಲವು ಕಾರಣಗಳಿಂದ ಆ ಎರಡು ಸಂಬಂಧಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಗೌರಿ ನನ್ನ ಜೀವನಕ್ಕೆ ಬಂದಿರುವುದು ನನ್ನ ಸೌಭಾಗ್ಯ. ಈಗ ನಾನು ಪರಿಪೂರ್ಣನಾಗಿದ್ದೇನೆ ಎಂದು ನನಗೆ ಅನಿಸುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ಕಳೆದ ಒಂದು ವರ್ಷದಲ್ಲಿ ಆಮೀರ್ ಖಾನ್ ಮತ್ತು ಗೌರಿ ಚೀನಾದಲ್ಲಿ ನಡೆದ ಮಕಾವೊ ಅಂತಾರಾಷ್ಟ್ರೀಯ ಕಾಮಿಡಿ ಫೆಸ್ಟಿವಲ್ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಆಮೀರ್ ಖಾನ್ ಪುತ್ರಿ













