ಮುಂಬೈ: ಬಾಲಿವುಡ್‌ನ ಸ್ಟಾರ್ ಆಮೀರ್ ಖಾನ್ (Aamir Khan) ಜು.5ರಂದು ಪ್ರೇಯಸಿ ಗೌರಿ (Gauri) ಜೊತೆ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಪ್ರೇಯಸಿ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಇದೀಗ ಗೌರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಅತ್ಯಾಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಇದನ್ನೂ ಓದಿ: ಗರ್ಲ್‌ಫ್ರೆಂಡ್ ಗೌರಿ ಜೊತೆ ಆಮೀರ್ ಖಾನ್ ಲಂಚ್ ಡೇಟ್
ಆಮೀರ್ ಖಾನ್ ಸದ್ಯ ಗೌರಿ ಅವರ ಜೊತೆ ಮೂರನೇ ಮದುವೆ ಆಗುತ್ತಿದ್ದಾರೆ. ಇದಕ್ಕೂ ಮುನ್ನ ಆಮೀರ್ ಖಾನ್ 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು. ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನದ ಬಳಿಕ 2002ರಲ್ಲಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಲಗಾನ್ ಚಿತ್ರದ ಸಹ-ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಬಳಿಕ ಇವರಿಬ್ಬರು 2021ರಲ್ಲಿ ಬೇರ್ಪಟ್ಟರು. ದಂಪತಿಗೆ ಸರೋಗೆಸಿ ಮೂಲಕ ಜನಿಸಿದ ಆಜಾದ್ ಎಂಬ ಮಗನಿದ್ದಾನೆ.
ಯಾರಿದು ಗೌರಿ ಸ್ಪ್ರ‍್ಯಾಟ್?
ಮೂಲತಃ ಬೆಂಗಳೂರಿನವರಾದ (Bengaluru) ಗೌರಿ ಸ್ಪ್ರ‍್ಯಾಟ್ ತಮ್ಮ ಜೀವನದ ಬಹುಭಾಗವನ್ನು ಸಿಲಿಕಾನ್ ಸಿಟಿಯಲ್ಲೇ ಕಳೆದಿದ್ದಾರೆ. ಇವರು ಬೆಂಗಳೂರಿನಲ್ಲಿ ಸಲೂನ್ ನಡೆಸುತ್ತಿದ್ದ ರೀಟಾ ಸ್ಪ್ರ‍್ಯಾಟ್ ಅವರ ಪುತ್ರಿ. 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಫ್ಯಾಶನ್ ಕೋರ್ಸ್ ಪೂರ್ಣಗೊಳಿಸಿದ್ದು, ಸದ್ಯ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಮುಂಬೈನಲ್ಲಿ ಸಲೂನ್ ನಡೆಸುತ್ತಿದ್ದಾರೆ. ಇವರಿಗೆ 7 ವರ್ಷದ ಮಗುವಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಮಾಜಿ ಪತ್ನಿ ಮನೆಗೆ ಗೆಳತಿಯೊಂದಿಗೆ ಬಂದ ಆಮೀರ್ ಖಾನ್
ಆಮೀರ್ ಖಾನ್ ತಾವಾಗಿಯೇ ಪರಿಚಯಿಸುವುದಕ್ಕೂ ಮುನ್ನ ತಮ್ಮ ಪ್ರೀತಿಯನ್ನು ಬರೋಬ್ಬರಿ 18 ತಿಂಗಳುಗಳ ಕಾಲ ಗೌಪ್ಯವಾಗಿಟ್ಟಿದ್ದರು. ಯಾರಿಗೂ ಗೊತ್ತಾಗದಂತೆ ಗೌರಿ ಅವರನ್ನು ಬೆಂಗಳೂರಿನಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರು.
ಅದಾದ ಬಳಿಕ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಆಮೀರ್ ಖಾನ್, ನನ್ನ ಜೀವನಕ್ಕೆ ಗೌರಿ ಬಂದಾಗಿನಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ಕಿರಣ್ ಮತ್ತು ರೀನಾ ಅವರೊಂದಿಗಿನ ನನ್ನ ಸಂಬಂಧ ಕೂಡ ತುಂಬಾ ಆಳವಾಗಿತ್ತು, ಆದರೆ ಕೆಲವು ಕಾರಣಗಳಿಂದ ಆ ಎರಡು ಸಂಬಂಧಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಗೌರಿ ನನ್ನ ಜೀವನಕ್ಕೆ ಬಂದಿರುವುದು ನನ್ನ ಸೌಭಾಗ್ಯ. ಈಗ ನಾನು ಪರಿಪೂರ್ಣನಾಗಿದ್ದೇನೆ ಎಂದು ನನಗೆ ಅನಿಸುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ಕಳೆದ ಒಂದು ವರ್ಷದಲ್ಲಿ ಆಮೀರ್ ಖಾನ್ ಮತ್ತು ಗೌರಿ ಚೀನಾದಲ್ಲಿ ನಡೆದ ಮಕಾವೊ ಅಂತಾರಾಷ್ಟ್ರೀಯ ಕಾಮಿಡಿ ಫೆಸ್ಟಿವಲ್ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳೂ ಹೆಚ್ಚಾಗುತ್ತಾರೆ – ಡಾನ್ 3 ವಿವಾದದಲ್ಲಿ ರಣವೀರ್‌ಗೆ ಕಂಗನಾ ಬೆಂಬಲ



