ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರು ಕರೆದಿದ್ದ ಸಭೆಗೆ ಪ್ರಮುಖ ಶಾಸಕರು ಮತ್ತು ಸಂಸದರು ಗೈರಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಮಮತಾ ಬ್ಯಾನರ್ಜಿಯವರು ಶುಕ್ರವಾರ 2ನೇ ಬಾರಿಗೆ ತಮ್ಮ ನಿವಾಸದಲ್ಲಿ ಶಾಸಕರ ಹಾಗೂ ಸಂಸದರ ಸಭೆ ಕರೆದಿದ್ದರು. ಈ ಸಭೆಯಲ್ಲಿ 8 ಜನ ಶಾಸಕರು ಮತ್ತು 6 ಜನ ಸಂಸದರು ಮಾತ್ರ ಭಾಗಿಯಾಗಿದ್ದು, ಪಕ್ಷದೊಳಗಿನ ಆಂತರಿಕ ಬಿರುಕು ಮತ್ತಷ್ಟು ತೀವ್ರಗೊಂಡಿದೆ. ಇದನ್ನೂ ಓದಿ: ಟಿಎಂಸಿ ರೆಬೆಲ್ ಶಾಸಕರ ಸಂಪರ್ಕದಲ್ಲಿ 23 ಸಂಸದರು – ದೀದಿಗೆ ಪಕ್ಷ ಉಳಿಸಿಕೊಳ್ಳೋ ಸಂಕಷ್ಟ
ಟಿಎಂಸಿ ಪಶ್ಚಿಮ ಬಂಗಾಳದಲ್ಲಿ (West Bengal) 80 ಶಾಸಕರು ಮತ್ತು 42 ಸಂಸದರನ್ನು ಹೊಂದಿದೆ. ಆದರೆ ಟಿಎಂಸಿಯ ಸುಪ್ರೀಂ ನಾಯಕಿಯ ಸಭೆಗೆ ಬಹುತೇಕ ಶಾಸಕರು, ಸಂಸದರು ಗೈರಾಗುತ್ತಿದ್ದು, ತಾನೇ ಕಟ್ಟಿ ಬೆಳಸಿದ ಪಕ್ಷದಲ್ಲಿ ದೀದಿ ಮೂಲೆಗುಂಪಾಗುತ್ತಿದ್ದಾರಾ ಅನ್ನೋ ಪ್ರಶ್ನೆಗಳು ಮೂಡಿವೆ.
ಸಭೆಯಲ್ಲಿ ಶಾಸಕರಾದ ಬೀನಾ ಮೊಂಡಲ್, ಅಶಿಮಾ ಪಾತ್ರ, ಮದನ್ ಮಿತ್ರ, ಕುನಾಲ್ ಘೋಷ್, ಫಿರ್ಹಾದ್ ಹಕೀಮ್, ಸೋಭಾಂದೇಬ್ ಚಟ್ಟೋಪಾಧ್ಯಾಯ, ಬಿಮನ್ ಬ್ಯಾನರ್ಜಿ ಮತ್ತು ಅಶೋಕ್ ಕುಮಾರ್ ದೇಬ್, ಸಂಸದರಾದ ಡೋಲಾ ಸೇನ್, ಮಾಲಾ ರಾಯ್, ಕಲ್ಯಾಣ್ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒಬ್ರೇನ್ ಮತ್ತು ಸುದೀಪ್ ಬಂಡೋಪಾಧ್ಯಾಯ ಭಾಗಿಯಾಗಿದ್ದರು.
ಪಕ್ಷದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಟಿಎಂಸಿ ಇಬ್ಭಾಗವಾಗುತ್ತ ಸಾಗುತ್ತಿರುವುದು ಬಹುತೇಕ ಸ್ಪಷ್ಟವಾಗಿದೆ. ಆದರೆ ಈ ಸಭೆಗೆ ಎಲ್ಲಾ ಶಾಸಕರನ್ನು ಆಹ್ವಾನಿಸಿರಲಿಲ್ಲ. ಇದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಾಗಿತ್ತು. ಇದರಲ್ಲಿ ಸಂಸದರಾದ ಮಹುವಾ ಮೊಯಿತ್ರಾ, ಸುಷ್ಮಿತಾ ದೇವ್, ಮುಕುಲ್ ಸಂಗ್ಮಾ ಮತ್ತು ರಾಜೇಶ್ ತ್ರಿಪಾಠಿ ಅವರಂತಹ ಅನೇಕರು ಭಾಗಿಯಾಗಿದ್ದರು ಎಂದು ಟಿಎಂಸಿ ಪಕ್ಷ ತಿಳಿಸಿದೆ.ಇದನ್ನೂ ಓದಿ: ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ – ದೀದಿ ವಿರುದ್ಧ ಎಫ್‌ಐಆರ್
ವಿಭಜನೆಯತ್ತ ಟಿಎಂಸಿ ಪಕ್ಷ:
ಟಿಎಂಸಿ ಪಕ್ಷದ ಉಚ್ಛಾಟಿತ ಶಾಸಕ ಋತುಬ್ರತಾ ಬ್ಯಾನರ್ಜಿ ವಿಪಕ್ಷ ನಾಯಕರಾಗಲು ಬೆಂಬಲ ಘೋಷಿಸಿ ಸ್ಪೀಕರ್ ರತೀಂದ್ರ ಭೋಸ್ ಅವರನ್ನ ಭೇಟಿಯಾಗಿದ್ದರು. ಬಳಿಕ ಸ್ಪೀಕರ್ ಉಚ್ಚಾಟಿತ ಶಾಸಕರ ಬೆಂಬಲಿಗ ಬಣವನ್ನು ವಿಪಕ್ಷವಾಗಿ ಮಾನ್ಯಗೊಳಿಸಿದ್ದರು. ನಂತರ ಬಂಡಾಯ ಶಾಸಕರು ನಮ್ಮದೇ ಅಸಲಿ ಟಿಎಂಸಿ ಎಂದು ಘೊಷಿಸಿಕೊಂಡಿದ್ದರು. ಇದು ದೀದಿಯ ಟಿಎಂಸಿ ಪಕ್ಷ ವಿಭಜನೆಗೊಳ್ಳುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತ್ತು.
ಸಂಸತ್ತಿನಲ್ಲೂ ಟಿಎಂಸಿ ಇಬ್ಭಾಗವಾಗುವ ಮುನ್ಸೂಚನೆಯಿದ್ದು, ಸುಮಾರು 20ಕ್ಕೂ ಹೆಚ್ಚು ಸಂಸದರು ಈಗಾಗಲೇ ಬಂಡಾಯ ಗುಂಪಿನ ಶಾಸಕರ ಸಂಪರ್ಕದಲ್ಲಿದ್ದಾರೆ. ಹಲವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದು, ಪಕ್ಷ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಿಜೆಪಿ ಸಂಪರ್ಕದಲ್ಲಿ 20 ಟಿಎಂಸಿ ಸಂಸದರು – ಒಡೆದು ಹೋಳಾಗುತ್ತಾ ದೀದಿ ಪಕ್ಷ?
