ಕೋಲ್ಕತ್ತಾ: ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಕೀಲೆ ರಿಂಕಿ ಸೇನ್ ಚಟರ್ಜಿ ನೀಡಿದ ದೂರಿನ ಆಧಾರದ ಮೇಲೆ ಸಿಲಿಗುರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೂನ್ 2ರಂದು ಕೋಲ್ಕತ್ತಾದ ರಾಣಿ ರಶ್ಮೋನಿ ರಸ್ತೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಇದನ್ನೂಓದಿ:ಭಯ ಹುಟ್ಟಿಸಲು ರಾಹುಲ್ ಗಾಂಧಿಯಿಂದ `ಆರ್ಥಿಕ ಸುನಾಮಿ’ ಹೇಳಿಕೆ: ಬಿಜೆಪಿ ಆರೋಪ
ಬಾಂಗ್ಲಾದೇಶದ ಪ್ರಜೆ ಉಸ್ಮಾನ್ ಹಾದಿ ಹತ್ಯೆ ಪ್ರಕರಣವನ್ನ ಉಲ್ಲೇಖಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಈ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯದ ಪಾತ್ರದ ಬಗ್ಗೆ ಪರೋಕ್ಷ ಆರೋಪ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಉಸ್ಮಾನ್ ಹಾದಿ ಹತ್ಯೆಯಾಗಿದ್ದರು. ಬಳಿಕ ಆರೋಪಿಗಳು ಮೇಘಾಲಯ ಗಡಿ ಮೂಲಕ ಪಶ್ಚಿಮ ಬಂಗಾಳಕ್ಕೆ ಬಂದಿದ್ದು, ಅವರನ್ನು ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಮತಾ, ಈ ವಿಷಯವನ್ನು ಇಷ್ಟು ದಿನ ಹೇಳಿರಲಿಲ್ಲ. ಆದರೆ ಈಗ ಹೇಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದರು. ಇದನ್ನೂಓದಿ:ವೆನೆಜುವೆಲಾ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಭೇಟಿಯಾದ ಮೋದಿ, ಎಸ್.ಜೈಶಂಕರ್ – ವೆನೆಜುವೆಲಾದಿಂದ ಇಂಧನ ಖರೀದಿಸುತ್ತಾ ಭಾರತ?
ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುವಂತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.













