ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಸ್ಥರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಸಂಸದ ಸುನೀಲ್ ಬೋಸ್ (Sunil Bose) ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ವೇಲೆ ತಲಾ 1 ಲಕ್ಷ ರೂ. ಪರಿಹಾರವನ್ನೂ ವಿತರಿಸಿದರು.

ಹನೂರು ತಾಲೂಕಿನ ತೋಮಿಯರ್ ಪಾಳ್ಯ, ಮರಿಯಮಂಗಲ ಮತ್ತು ಲಾಸರ್ ದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಸಂಸದರು ಮೃತ ಜಾನ್ ರೋಸ್ ಪೀಟರ್, ಸಬಸ್ಟಿಯನ್ ಡೇವಿಡ್ ಕುಮಾರ್ ಮತ್ತು ಆಂತೋಣಿ ಸ್ವಾಮಿ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಿದರು. ಈ ವೇಳೆ ಮೃತಪಟ್ಟ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರವನ್ನು ಸಂಸದ ಸುನೀಲ್ ಬೋಸ್ ನೀಡಿದರು.
ಕುಟುಂಬಸ್ಥರ ಅಳಲು ಕೇಳಿದ ಸಂಸದರು, ಈ ಘಟನೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮಾಜಿ ಶಾಸಕ ಆರ್. ನರೇಂದ್ರ, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್,ಕಾಂಗ್ರೆಸ್ ಜಿಲ್ಲಾ ವಕ್ತಾರ ಮಧುವನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಪ್ಪಳಿ ಮಹದೇವ ನಾಯಕ, ಮುಖಂಡರಾದ ಮಂಗಲ ಪುಟ್ಟರಾಜು ಚೇತನ್ ದೊರೆರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಸಂಜಯ್, ಸೇರಿದಂತೆ ಇನ್ನಿತರರು ಹಾಜರಿದ್ದರು.

