ಕೊಚ್ಚಿ: ಸ್ಕಾಟಿಷ್ ನ್ಯಾಷನಲ್ ಪಾರ್ಟಿ (SNP)ಯ ಹಿರಿಯ ರಾಜಕಾರಣಿ ಹಾಗೂ ಸ್ಕಾಟಿಷ್ ಸಂಸತ್ ಸದಸ್ಯ ಮಾರ್ಟಿನ್ ಡೇ (Martyn Day), ತಮ್ಮ ಕೇರಳ ಮೂಲದ ಸಂಗಾತಿ ನಿಧಿನ್ ಚಾಂದ್ (Nidhin Chand) ಅವರೊಂದಿಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ದಾಂಪತ್ಯ ಜೀವನದ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.
ನಿಧಿನ್ ಚಾಂದ್ ಅವರ ಬಹುಕಾಲದ ಆಸೆಯಂತೆ ಗುರುವಾಯೂರಿನಲ್ಲಿ ವಿವಾಹ ಸಂಪ್ರದಾಯಗಳನ್ನು ಪೂರ್ಣಗೊಳಿಸಲಾಯಿತು. ಎರ್ನಾಕುಲಂ ಜಿಲ್ಲೆಯ ಪಿರವಂ ಮೂಲದ ನಿಧಿನ್, ತಮ್ಮ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಮಂಗಳವಾರ ದೇವಸ್ಥಾನ ಪಟ್ಟಣದಲ್ಲಿರುವ ಆಡಿಟೋರಿಯಂನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಮಾರ್ಟಿನ್ ಡೇ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟರು.
View this post on Instagram
ಮಾರ್ಟಿನ್ ಡೇ ಅವರು ಕೇರಳದ ವಿವಾಹ ಸಮಾರಂಭದ ಫೋಟೋಗಳನ್ನ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲೂ ಹಂಚಿಕೊಂಡಿದ್ದು, ದಂಪತಿಯ ಸಾಂಪ್ರದಾಯಿಕ ಸಂಭ್ರಮದ ಕೆಲವು ಕ್ಷಣಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
2016ರಲ್ಲೇ ಬ್ರಿಟನ್‌ನಲ್ಲಿ ವಿವಾಹ
ವರದಿ ಪ್ರಕಾರ, ಮಾರ್ಟಿನ್ ಡೇ ಮತ್ತು ನಿಧಿನ್ ಚಾಂದ್ ಅವರು 2016 ರಲ್ಲೇ ಬ್ರಿಟನ್‌ನಲ್ಲಿ ವಿವಾಹವಾಗಿದ್ದರು. ಆದರೆ ಗುರುವಾಯೂರು ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿವಾಹ ವಿಧಿವಿಧಾನಗಳನ್ನ ಪೂರ್ಣಗೊಳಿಸಬೇಕು ಎಂಬುದು ನಿಧಿನ್ ಅವರ ಬಹುಕಾಲದ ಆಸೆಯಾಗಿತ್ತು. ಹಲವು ಕಾರಣಗಳಿಂದ ಈ ಯೋಜನೆ ಹಲವು ವರ್ಷಗಳ ಕಾಲ ಮುಂದೂಡಲ್ಪಟ್ಟಿತ್ತು. 2018ರ ಕೇರಳ ಪ್ರವಾಹ ಹಾಗೂ ಬಳಿಕ ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ದಂಪತಿಗೆ ಕೇರಳಕ್ಕೆ ಬಂದು ವಿವಾಹ ವಿಧಿವಿಧಾನಗಳನ್ನು ನೆರವೇರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸುಮಾರು 1 ದಶಕದ ಬಳಿಕ ನಿಧಿನ್ ಅವರ ಬಹುಕಾಲದ ಕನಸು ನನಸಾಗಿದೆ.
View this post on Instagram
ಯಾರು ಈ ಮಾರ್ಟಿನ್ ಡೇ?
55 ವರ್ಷದ ಮಾರ್ಟಿನ್ ಡೇ ಅವರು ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಹಿರಿಯ ರಾಜಕಾರಣಿಯಾಗಿದ್ದು, ಲಿನ್‌ಲಿತ್‌ಗೋ ಪ್ರದೇಶವನ್ನು ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 1999ರಲ್ಲಿ ವೆಸ್ಟ್ ಲೋಥಿಯನ್ ಕೌನ್ಸಿಲ್‌ಗೆ ಮೊದಲ ಬಾರಿಗೆ ಆಯ್ಕೆಯಾದ ಅವರು, 2015ರಲ್ಲಿ ಲಿನ್‌ಲಿತ್‌ಗೋ ಮತ್ತು ಈಸ್ಟ್ ಫಾಲ್ಕರ್ಕ್ ಕ್ಷೇತ್ರದಿಂದ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ಗೆ ಸಂಸದರಾಗಿ ಪ್ರವೇಶಿಸಿದರು. 2024ರ ವರೆಗೆ ಸಂಸದರಾಗಿದ್ದ ಅವರು ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಸೇರಿದಂತೆ ವಿವಿಧ ಕ್ಷೇತ್ರಗಳ SNP ಫ್ರಂಟ್‌ಬೆಂಚ್ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
2026ರ ಸ್ಕಾಟಿಷ್ ಸಂಸತ್ ಚುನಾವಣೆಯಲ್ಲಿ ಮತ್ತೆ ಚುನಾವಣಾ ರಾಜಕೀಯಕ್ಕೆ ಮರಳಿದ ಮಾರ್ಟಿನ್ ಡೇ, ಫಾಲ್ಕರ್ಕ್ ಈಸ್ಟ್ ಮತ್ತು ಲಿನ್‌ಲಿತ್‌ಗೋ ಕ್ಷೇತ್ರದಿಂದ MSP ಆಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಸ್ಕಾಟಿಷ್ ಸಂಸತ್‌ನ ಕ್ಲೈಮೇಟ್ ಆ್ಯಕ್ಷನ್ ಕಮಿಟಿ ಹಾಗೂ ಎಕಾನಮಿ, ಟೂರಿಸಂ ಅಂಡ್ ಎನರ್ಜಿ ಕಮಿಟಿಗಳ ಸದಸ್ಯರಾಗಿದ್ದಾರೆ.
ರಾಜಕೀಯ ಪ್ರವೇಶಿಸುವ ಮೊದಲು ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ವೆಸ್ಟ್ ಲೋಥಿಯನ್ ಸ್ಥಳೀಯ ಆಡಳಿತದಲ್ಲೂ ತೊಡಗಿಸಿಕೊಂಡಿದ್ದರು.
ಯಾರು ನಿಧಿನ್ ಚಾಂದ್?
ಎರ್ನಾಕುಲಂ ಜಿಲ್ಲೆಯ ಪಿರವಂ ಪ್ರದೇಶದ ಮೂಲದ ನಿಧಿನ್ ಚಾಂದ್ ಅವರು ಉನ್ನತ ಶಿಕ್ಷಣಕ್ಕಾಗಿ 2008ರ ನವೆಂಬರ್‌ನಲ್ಲಿ ಬ್ರಿಟನ್‌ಗೆ ತೆರಳಿದ್ದರು. ಅಲ್ಲಿಯೇ ಅವರು ಐಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ನಿಧಿನ್ ಅವರು ನಿವೃತ್ತ ಪಶುವೈದ್ಯಾಧಿಕಾರಿ ಕೆ.ಎನ್. ಚಂದ್ರನ್ ಹಾಗೂ ಮಾಜಿ ಪಂಪಾಕುಡ ಗ್ರಾಮ ಪಂಚಾಯತ್ ಸದಸ್ಯೆ ರಾಜಮ್ಮ ಅವರ ಪುತ್ರಿ. ಬ್ರಿಟನ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಹೊಸ ವಲಸೆ ನಿಯಮಗಳಿಂದ ಸಾವಿರಾರು ವಿದ್ಯಾರ್ಥಿಗಳ ವೀಸಾಗಳು ರದ್ದಾಗಿದ್ದವು. ಈ ಪೈಕಿ ನಿಧಿನ್ ಅವರ ವೀಸಾವೂ ಸೇರಿತ್ತು. ಆದರೆ ಬ್ರಿಟನ್ ತೊರೆಯುವ ಬದಲು ನಿಧಿನ್ ಅವರು ವಿದ್ಯಾರ್ಥಿಗಳ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದರು.
ಭಾರತೀಯ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿ ವಿವಿಧ ಸಂಸದೀಯ ಸಮಿತಿಗಳ ಮುಂದೆ ತಮ್ಮ ವಾದ ಮಂಡಿಸಿದರು. ಇದೇ ಸಂದರ್ಭದಲ್ಲಿ ಲಿನ್‌ಲಿತ್‌ಗೋ ಮತ್ತು ಈಸ್ಟ್ ಫಾಲ್ಕರ್ಕ್ ಕ್ಷೇತ್ರದ ಸಂಸದರಾಗಿದ್ದ ಮಾರ್ಟಿನ್ ಡೇ ಅವರನ್ನು ಅವರು ಭೇಟಿಯಾದರು. ಇದರಿಂದ ಆರಂಭವಾದ ಪರಿಚಯ ಮುಂದೆ ಪ್ರೀತಿಗೆ ತಿರುಗಿ, 2016ರಲ್ಲಿ ಬ್ರಿಟನ್‌ನಲ್ಲಿ ವಿವಾಹವಾಗಿದ್ದ ಈ ಜೋಡಿ ಇದೀಗ ನಿಧಿನ್ ಅವರ ಬಹುಕಾಲದ ಆಸೆಯಂತೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸಿದೆ.
