ಗಾಂಧೀನಗರ: ಗುಜರಾತ್‌ನ (Gujarat) ಭಾವನಗರ (Bhavnagar) ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ ಐವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಭಾವನಗರದ ಖರ್ಖಡಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮದ್ಯಕ್ಕೆ ಕಲುಷಿತ ವಸ್ತುಗಳನ್ನು ಬೆರೆಸಿ ಮಾರಾಟ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಗಂಭೀರ ಪ್ರಕರಣದ ತನಿಖೆಗಾಗಿ ಗುಜರಾತ್ ಉಪಮುಖ್ಯಮಂತ್ರಿಯವರ ನಿರ್ದೇಶನ ನೀಡಿದ್ದು, ರಾಜ್ಯ ಮೇಲ್ವಿಚಾರಣಾ ಕೋಶ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿವೆ. ಇದನ್ನೂ ಓದಿ: ಡ್ಯೂಪ್ಲಿಕೇಟ್ ಕೀ ಬಳಸಿ ಐಷಾರಾಮಿ ಕಾರುಗಳ ಕಳ್ಳತನ – ಕರ್ನಾಟಕದಿಂದ ರಾಜಸ್ಥಾನವರೆಗೆ ‘ಕಾರ್ ಕಳ್ಳರ’ ಜಾಲ; ಇಬ್ಬರು ಅರೆಸ್ಟ್
ಮಧ್ಯಪ್ರದೇಶದ ಉಜ್ಜಯನಿಯಿಂದ ತಂದಿದ್ದ ಮದ್ಯಕ್ಕೆ ಕಲುಷಿತ ವಸ್ತುಗಳ ಮಿಶ್ರಣ:
ಮಧ್ಯಪ್ರದೇಶದ ಉಜ್ಜಯನಿಯಿಂದ ತಂದಿದ್ದ ಸುಮಾರು 230 ಬಾಟಲಿ ಬ್ರ್ಯಾಂಡೆಡ್ ಮದ್ಯವನ್ನು ಕಳ್ಳಸಾಗಾಣೆ ಮೂಲಕ ತರಿಸಿದ್ದರು. ಅದನ್ನು ವಾರ್ತೇಜ್‌ನ ಅಂಬ್ಲಿವಾಡಿ ಪ್ರದೇಶಕ್ಕೆ ಕೊಂಡೊಯ್ದು ಪ್ರಕರಣದ ಕಿಂಗ್‌ಪಿನ್ ಗೌತಮ್ ಸೋಲಂಕಿ ಮನೆಯಲ್ಲಿ ಆತ ಹಾಗೂ ಸ್ನೇಹಿತರು ಸೇರಿಕೊಂಡು ಕಳ್ಳಭಟ್ಟಿ ಬೆರೆಸಿ ನಕಲಿ ಮದ್ಯ ತಯಾರಿಸಿದ್ದರು. ಬಳಿಕ ಸ್ಥಳೀಯರಿಗೆ ಮಾರಾಟ ಮಾಡಲಾಗಿದ್ದು, ಇದನ್ನು ಕುಡಿದು ಉಪೇಂದ್ರಸಿಂಗ್ ಗೋಹಿಲ್, ಕನಕಸಿಂಗ್ ಗೋಹಿಲ್ ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿದ್ದಾರೆ.
ಇನ್ನೂ ಇದನ್ನು ಸೇವಿಸಿದ 20 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 10 ಜನರನ್ನು ಭಾವನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನು 10 ಜನರು ಬೇರೆ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.ಇದನ್ನೂ ಓದಿ: ಒಂದು ದಿನ, ಒಂದು ವಿಶ್ವವಿದ್ಯಾಲಯ – ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವರ ನೇರ ಸಂವಾದ!
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ಎಸ್‌ಡಿಎಂ ಅಕ್ಷರ್ ವ್ಯಾಸ್ ಹಾಗೂ ಎಸ್‌ಪಿ ನಿತೇಶ್ ಪಾಂಡೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಪೊಲೀಸರು ಪ್ರಮುಖ ಆರೋಪಿ ಗೌತಮ್ ಸೋಲಂಕಿ ಮನೆ ಮೇಲೆ ದಾಳಿ ನಡೆಸಿ, 130ಕ್ಕೂ ಹೆಚ್ಚು ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಮದ್ಯ ಕಲುಷಿತಗೊಂಡಿದ್ದು ಹೇಗೆ? ಬಾಟಲಿಗಳನ್ನು ಪೂರೈಸಿದ್ದು ಯಾರು? ಮತ್ತು ನಕಲಿ ಮದ್ಯ ಜನರನ್ನು ತಲುಪಿದ್ದು ಹೇಗೆ ಎಂಬುದರ ಬಗ್ಗೆ ಎಸ್‌ಎಂಸಿ ಮತ್ತು ಎಫ್‌ಎಸ್‌ಎಲ್ ತಂಡಗಳು ತನಿಖೆ ನಡೆಸುತ್ತಿವೆ. ಜೊತೆಗೆ ಉಜ್ಜಯನಿಯಿಂದ ತಂದ ಮದ್ಯದ ಮೂಲ ಮತ್ತು ವಿತರಣಾ ಜಾಲದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಸಾವಿಗೆ ಹಾಗೂ ಅಸ್ವಸ್ಥತೆಗೆ ನಿಖರವಾಗಿ ಯಾವ ವಸ್ತು ಕಾರಣ ಎಂಬುದು ವೈದ್ಯಕೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಯ ನಂತರ ಹೊರಬರಲಿದೆ.ಇದನ್ನೂ ಓದಿ: ಡೇಟಿಂಗ್ ಆಪ್ ಮೂಲಕ 67 ವರ್ಷದ ವ್ಯಕ್ತಿಗೆ 1.30 ಲಕ್ಷ ವಂಚನೆ – ಇಬ್ಬರು ಯುವತಿಯರು ಅರೆಸ್ಟ್

