– ರಾಷ್ಟ್ರವ್ಯಾಪಿ ಕಾರ್ಯಕ್ರಮ ರೂಪಿಸಲು ಮುಂದಾದ ಮೋದಿ ಸರ್ಕಾರ
– Gen Z ತಲುಪಲು ಇನ್‌ಸ್ಟಾದಲ್ಲಿ ಸಕ್ರಿಯವಾಗಿರಿ
ನವದೆಹಲಿ: ದೇಶದ ಯುವಜನತೆ ಹಾಗೂ ವಿದ್ಯಾರ್ಥಿ ಸಮುದಾಯದೊಂದಿಗೆ ನೇರ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ರಾಷ್ಟ್ರವ್ಯಾಪಿ ಕಾರ್ಯಕ್ರಮವೊಂದನ್ನು ರೂಪಿಸುತ್ತಿದೆ.
‘ಒಂದು ದಿನ, ಒಂದು ವಿಶ್ವವಿದ್ಯಾಲಯ (One Day, One University) ಎಂಬ ಹೆಸರಿನ ಈ ಪ್ರಸ್ತಾವಿತ ಯೋಜನೆಯಡಿ, ಪ್ರತಿದಿನ ಒಬ್ಬೊಬ್ಬ ಕೇಂದ್ರ ಸಚಿವರು(Union minister) ದೇಶದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಸಂವಾದ ನಡೆಸಲಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಉಪಕ್ರಮದ ಕುರಿತು ಚರ್ಚೆ ನಡೆದಿದೆ.
ಸಚಿವರು ವಿದ್ಯಾರ್ಥಿಗಳ ಆತಂಕ ಮತ್ತು ಸಮಸ್ಯೆಗಳನ್ನು ಆಲಿಸಲಿದ್ದಾರೆ, ದೇಶದ ಪ್ರಮುಖ ವಿಚಾರಗಳ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಹಾಗೂ ಯುವಜನರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸಚಿವರ ನಡುವೆ ಈ ಕಾರ್ಯಕ್ರಮದ ಸಮನ್ವಯತೆ ಸಾಧಿಸುವ ಜವಾಬ್ದಾರಿಯನ್ನು ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಹಿಸಲಾಗಿದೆ.
ಯುಜಿಸಿ (UGC) ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 1,300 ವಿಶ್ವವಿದ್ಯಾಲಯಗಳಿದ್ದು (57 ಕೇಂದ್ರೀಯ, 522 ರಾಜ್ಯ ವಿಶ್ವವಿದ್ಯಾಲಯಗಳು, ಡೀಮ್ಡ್ ಹಾಗೂ ಖಾಸಗಿ ವಿವಿಗಳು), ಎಲ್ಲೆಡೆ ಈ ಅಭಿಯಾನ ಹಂತ ಹಂತವಾಗಿ ನಡೆಯಲಿದೆ. ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ `ಉಚಿತ ಆನ್‌ಲೈನ್ ತರಬೇತಿ’ ಅನುಷ್ಠಾನಕ್ಕೆ ಕೇಂದ್ರ ಸಿದ್ಧತೆ
ಇತ್ತೀಚಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಉಚಿತ ಆನ್‌ಲೈನ್ ಕೋಚಿಂಗ್, ಎಐ (AI) ಕೌಶಲ್ಯ ತರಬೇತಿ ಹಾಗೂ ಯುವಜನರಿಗೆ ಉದ್ಯೋಗಾವಕಾಶಗಳ ಕುರಿತು ಹಲವು ಯೋಜನೆಗಳನ್ನು ಘೋಷಿಸಿದ್ದರು. ಇದೀಗ ಈ ಪ್ರಸ್ತಾವಿತ ವಿವಿ ಭೇಟಿಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸರ್ಕಾರ ನೇರ ಮುಖಾಮುಖಿ ಸಂಪರ್ಕ ಸಾಧಿಸಲು ಮುಂದಾಗಿದೆ.
ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ಜೆಎನ್ ಜಿ (Gen Z) ಪರಿಣಾಮಕಾರಿಯಾಗಿ ಮುಟ್ಟಿಸಲು ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗುವಂತೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮಹತ್ವದ ಸೂಚನೆ ನೀಡಿದ್ದಾರೆ.
ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಸಾಂಪ್ರದಾಯಿಕ ಸಂವಹನ ಮಾಧ್ಯಮಗಳ ಜತೆಗೆ ಆಧುನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಚಿವರಿಗೆ ಸಲಹೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ಖಾತೆ ಹೊಂದುವುದಷ್ಟೇ ಅಲ್ಲದೆ, ನಿಯಮಿತವಾಗಿ ಕಂಟೆಂಟ್ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರೊಂದಿಗೆ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳಬೇಕು.
ಸರ್ಕಾರದ ಮಹತ್ವದ ನಿರ್ಧಾರಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಕುರಿತು ಯುವಜನರನ್ನು ಆಕರ್ಷಿಸುವಂತಹ ಶಾರ್ಟ್ ವಿಡಿಯೋಗಳು, ರೀಲ್ಸ್ ಹಾಗೂ ಇನ್ಫೋಗ್ರಾಫಿಕ್ಸ್ ಮೂಲಕ ಮಾಹಿತಿ ಹಂಚಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ದೇಶದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೆಹಲಿ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ವಿರೋಧ ಪಕ್ಷಗಳು ಈ ವಿಚಾರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ್ದವು. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜುಲೈ 25 ರಂದು ಧರ್ಮೇಂದ್ರ ಪ್ರಧಾನ್ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

