-ನಕಲಿ ಪ್ರೊಫೈಲ್‌ನಿಂದ ಪರಿಚಯ, ಬಳಿಕ ಮೊಬೈಲ್ ಕದ್ದು, ಹಣ ವರ್ಗಾವಣೆ
ನವದೆಹಲಿ: ಡೇಟಿಂಗ್ ಆಪ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ 67 ವರ್ಷದ ವ್ಯಕ್ತಿಯೊಬ್ಬರನ್ನು ವಂಚಿಸಿ 1.30 ಲಕ್ಷ ರೂ. ಕಸಿದುಕೊಂಡ ಆರೋಪದಲ್ಲಿ ಇಬ್ಬರು ಯುವತಿಯರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ದಕ್ಷಿಣ-ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಬಂಧಿತರನ್ನು ದೆಹಲಿ ನಿವಾಸಿಗಳಾದ ಜ್ಯೋತ್ಸ್ನಾ (26) ಮತ್ತು ಮಾನಸಿ (21) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಿಎಂ ಕೇರ್ಸ್ ಅತಿದೊಡ್ಡ ಸಾಂಸ್ಥಿಕ ಹಗರಣ, ಮೋದಿ ಸರ್ಕಾರದಿಂದ ಸಾರ್ವಜನಿಕರ ನಂಬಿಕೆಗೆ ಮಾಡಿರುವ ದ್ರೋಹ: ಪ್ರಿಯಾಂಕ್ ಖರ್ಗೆ
ಪೊಲೀಸರ ಮಾಹಿತಿಯ ಪ್ರಕಾರ, ಜ್ಯೋತ್ಸ್ನಾ ಡೇಟಿಂಗ್ ಆಪ್‌ನಲ್ಲಿ ನಕಲಿ ಗುರುತಿನೊಂದಿಗೆ ಪ್ರೊಫೈಲ್ ಸೃಷ್ಟಿಸಿ 67 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಳು. ಬಳಿಕ ಆತನೊಂದಿಗೆ ಟೆಲಿಗ್ರಾಂ ಮೂಲಕವೂ ಸಂಪರ್ಕ ಮುಂದುವರಿದಿತ್ತು. ನಂತರ ತನ್ನ ಸಹಚರಿಯನ್ನು ಪರಿಚಯಿಸಿ, ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಆಕೆ ಎಂದು ನಂಬಿಸುವಂತೆ ಮಾಡಲಾಗಿತ್ತು.
ಜುಲೈ 20ರಂದು ಇಬ್ಬರು ಆರೋಪಿಗಳು ವ್ಯಕ್ತಿಯನ್ನು ಭೇಟಿಯಾಗಿದ್ದರು. ಜುಲೈ 24ರಂದು ದೆಹಲಿಯ ಡಿಫೆನ್ಸ್ ಕಾಲೋನಿಯ ರೆಸ್ಟೋರೆಂಟ್‌ನಲ್ಲಿ ಮೂವರು ಒಟ್ಟಿಗೆ ಊಟ ಮಾಡಿದ್ದರು. ರೆಸ್ಟೋರೆಂಟ್‌ನಿಂದ ಹೊರಬರುವಾಗ ವ್ಯಕ್ತಿಯ ಮೊಬೈಲ್ ಕಳುವಾಗಿತ್ತು. ಇದಾದ ಬಳಿಕ ಅವರ ಎರಡು ಬ್ಯಾಂಕ್ ಖಾತೆಗಳಿಂದ ಯುಪಿಐ ಮೂಲಕ 1.30 ಲಕ್ಷ ರೂ. ಅವರ ಅನುಮತಿಯಿಲ್ಲದೆ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ `ಉಚಿತ ಆನ್‌ಲೈನ್ ತರಬೇತಿ’ ಅನುಷ್ಠಾನಕ್ಕೆ ಕೇಂದ್ರ ಸಿದ್ಧತೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 25ರಂದು ದಕ್ಷಿಣ-ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಇ-ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬ್ಯಾಂಕ್ ವಹಿವಾಟಿನ ವಿವರ, ಫಲಾನುಭವಿ ಖಾತೆಗಳು, ಕೆವೈಸಿ ದಾಖಲೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ವಂಚನೆಯ ಹಣ ಮೊದಲು ಒಬ್ಬ ಆರೋಪಿಯ ಖಾತೆಗೆ ವರ್ಗಾವಣೆಯಾಗಿದ್ದು, ಬಳಿಕ ಮತ್ತೊಬ್ಬ ಆರೋಪಿಯ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಪೈಕಿ 90 ಸಾವಿರ ರೂ.ಯನ್ನು ಎಟಿಎಂ ಮೂಲಕ ವಿತ್‌ಡ್ರಾ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಮಹಿಳೆಯರು ಹಣವನ್ನು ಎಟಿಎಂನಿಂದ ಪಡೆಯುತ್ತಿರುವುದು ಪತ್ತೆಯಾಗಿದ್ದು, ತನಿಖೆಗೆ ಪ್ರಮುಖ ಸುಳಿವು ಸಿಕ್ಕಿತ್ತು. ತಾಂತ್ರಿಕ ತನಿಖೆ ಮತ್ತು ಹಣದ ವಹಿವಾಟಿನ ಜಾಡು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಕಳವು ಮಾಡಲಾದ ಮೊಬೈಲ್ ಫೋನ್ ಅನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಂತರ ನಾಶಪಡಿಸಲಾಗಿದೆ. ಸದ್ಯ ಆರೋಪಿಗಳಿಂದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ

