ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada) ಮೊದಲ ವಾರವೇ ತಮ್ಮ ಪ್ರಯಾಣ ಮುಗಿಸಿರುವ ಪ್ರಥಮ ಪ್ರಸಾದ್, ಈ ಸೀಸನ್ನಿಂದ ಎಲಿಮಿನೇಟ್ ಆಗಿ ಹೊರಬಂದ ಮೊದಲ ಕಂಟೆಸ್ಟೆಂಟ್ ಆಗಿದ್ದಾರೆ. ಬಿಗ್ಬಾಸ್ ಫ್ಲೈಟ್ನಲ್ಲಿ ಒಂದು ವಾರ ಸ್ಪರ್ಧಿಗಳೊಂದಿಗೆ ಕಳೆದಿರುವ ಪ್ರಥಮ, ಇದೀಗ ಟಾಪ್ 3 ಸ್ಥಾನಕ್ಕೆ ಹೋಗುವ ಅರ್ಹತೆ ಹೊಂದಿರುವ ಸ್ಪರ್ಧಿಗಳನ್ನು ಗುರುತಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಎಲ್ಲರೂ ಅರ್ಹತೆ ಹೊಂದಿರುವ ಕಾರಣಕ್ಕಾಗಿಯೇ ಮನೆಗೆ ಬಂದಿದ್ದಾರೆ ಎನ್ನುವ ಪ್ರಥಮ, ತಾವು ಮನೆಯಲ್ಲಿ ಉಳಿದುಕೊಂಡಿದ್ದರೆ ಟಾಪ್ 1 ಸ್ಥಾನದಲ್ಲಿರುತ್ತಿದ್ದೆ ಎಂದು ಹೇಳಿದ್ದಾರೆ. ʻಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಪ್ರಥಮ ಪ್ರಸಾದ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸದ್ಯ ಒಂದು ವಾರವಷ್ಟೇ ಕಳೆದಿರುವುದರಿಂದ ಟಾಪ್ 3ಯಲ್ಲಿ ಯಾರು ಇರಲಿದ್ದಾರೆ ಎಂಬುದನ್ನು ಹೇಳುವುದು ಕಷ್ಟ. ಆದರೆ, ಇಲ್ಲಿಯವರೆಗೆ ಸ್ಪರ್ಧಿಗಳ ಆಟದ ಗ್ರಾಫ್ ನೋಡಿದರೆ ಕೆಲವರನ್ನು ಊಹಿಸಬಹುದು ಎಂದು ಪ್ರಥಮ ಹೇಳಿದ್ದಾರೆ.

ತಮ್ಮ ಪ್ರಕಾರ ಟಾಪ್ 3ರಲ್ಲಿ ಇರಬಹುದಾದ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಪ್ರಥಮ, ಮೊದಲಿಗೆ ಸೌಂದರ್ಯ ಅವರ ಹೆಸರನ್ನು ಸೂಚಿಸಿದ್ದಾರೆ. ಸೌಂದರ್ಯ ಶೆಟ್ಟಿ ಇದೇ ರೀತಿಯ ಆಟವನ್ನು ಮುಂದುವರಿಸಿದರೆ, ಟಾಪ್ 3ಯಲ್ಲಿ ಸ್ಥಾನ ಪಡೆಯುವ ಅವಕಾಶ ಅವರಿಗಿದೆ. ಇನ್ನು ಗಗನ್ ಅವರ ನಾಯಕತ್ವ ಗುಣವನ್ನ ಪ್ರಥಮ ಮೆಚ್ಚಿಕೊಂಡಿದ್ದಾರೆ. ಆರಂಭದಲ್ಲಿ ಗಗನ್ ಉತ್ತಮವಾಗಿ ಜಡ್ಜ್ಮೆಂಟ್ ನೀಡಿದ್ದಾರೆ. ನಂತರ ಅವರ ಆಟದಲ್ಲಿ ಏರಿಳಿತಗಳು ಕಂಡುಬಂದರೂ, ಅವರಲ್ಲಿರುವ ನಾಯಕತ್ವದ ಗುಣದಿಂದಾಗಿ ಅವರು ಕೊನೆಯವರೆಗೂ ಇರುವ ಸಾಧ್ಯತೆ ಇದೆ ಎಂದು ಪ್ರಥಮ ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬ ಸ್ಪರ್ಧಿಯಾಗಿ ‘ಮಾಡರ್ನ್ ಮಹಾಕವಿ’ ಮಂಜು ಅವರ ಹೆಸರನ್ನು ಪ್ರಥಮ ಸೂಚಿಸಿದ್ದಾರೆ. ಮಂಜು ಅವರಿಗೆ ಕೊನೆಯವರೆಗೂ ಬಿಗ್ಬಾಸ್ ಮನೆಯಲ್ಲಿ ಉಳಿಯುವ ಎಲ್ಲಾ ಸಾಮರ್ಥ್ಯವೂ ಇದೆ. ಆದರೆ, ಆಟದಲ್ಲಿ ಇನ್ನಷ್ಟು ಉತ್ತಮವಾಗಿ ಭಾಗವಹಿಸಿದರೆ ಒಳ್ಳೆಯದು. ಮಂಜು ಅವರಿಗೆ ಉತ್ತಮ ವಾಕ್ಚಾತುರ್ಯವಿದೆ. ಹೀಗಾಗಿ ಟಾಪ್ 3 ಸ್ಥಾನಕ್ಕೆ ಹೋಗುವ ಅರ್ಹತೆ ಅವರಿಗೂ ಇದೆ ಎಂದು ಪ್ರಥಮ ಹೇಳಿದ್ದಾರೆ.
ಜೊತೆಗೆ, ಇದರರ್ಥ ಬೇರೆ ಯಾರಿಗೂ ಟಾಪ್ 3 ಸ್ಥಾನಕ್ಕೆ ಅರ್ಹತೆ ಇಲ್ಲ ಎಂದಲ್ಲ. ಸದ್ಯದ ಮಟ್ಟಿಗೆ ಸ್ಪರ್ಧಿಗಳ ಆಟವನ್ನು ಗಮನಿಸಿ ಈ ಮೂವರು ಹೆಸರುಗಳನ್ನು ತೆಗೆದುಕೊಂಡಿದ್ದೇನೆ. ಇದರಲ್ಲಿ ಯಾರೂ ಅನ್ಯಥಾ ಭಾವಿಸಬಾರದು ಎಂದು ಪ್ರಥಮ ಸ್ಪಷ್ಟಪಡಿಸಿದ್ದಾರೆ.

