ಬಿಗ್ ಬಾಸ್ ಸೀಸನ್ 13 ಆರಂಭವಾಗಿ ಎರಡನೇ ವಾರದಲ್ಲೇ ಅನಾರೋಗ್ಯ ಕಾರಣದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ದೊಡ್ಮನೆಯಿಂದ ಹೊರಬಂದಿದ್ದಾರೆ. ಸದ್ಯ ಓಂ ಪ್ರಕಾಶ್ ಖಾಸಗಿ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಚಿಕಿತ್ಸೆಯನ್ನ ಸಹ ಪಡೆಯುತ್ತಿದ್ದಾರೆ. ಇದೀಗ ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣವೇನು ಹಾಗೂ ಅವರ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಸೆಪ್ಪೆಂಬರ್ 13ಕ್ಕೆ ಓಂ ಪ್ರಕಾಶ್ ಶೋನಿಂದ ಹೊರನಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಓಡಾಡುವಾಗ ಸ್ಲಿಪ್ ಆಗಿ ಕಾಲು ನೋವು ಹೆಚ್ಚಾಗಿದೆ. ಕಾಲು ನೋವು ಜಾಸ್ತಿ ಆದ ಹಿನ್ನೆಲೆ ಬಿಗ್ ಬಾಸ್ ಆಯೋಜಕರು ಸೆಪ್ಟೆಂಬರ್ 13ರ ಮಧ್ಯಾಹ್ನ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಓಂ ಪ್ರಕಾಶ್ ಅವರನ್ನ ನೋಡಿದ ವೈದ್ಯರು ಸಂಪೂರ್ಣವಾಗಿ ರೆಸ್ಟ್ ಮಾಡಬೇಕು ಎಂದು ತಿಳಿಸಿದ್ದಾರೆ ಎಂದು ಓಂ ಪ್ರಕಾಶ್ ರಾವ್ ಕುಟುಂಬಸ್ಥರು `ಪಬ್ಲಿಕ್ ಟಿವಿ’ಗೆ ತಿಳಿಸಿದ್ದಾರೆ.
ಓಂ ಪ್ರಕಾಶ್ ರಾವ್‌ಗೆ 15 ವರ್ಷಗಳ ಹಿಂದೆ ಅಪಘಾತವಾಗಿತ್ತು. ಆಗ ತೊಡೆ ಮತ್ತು ಬಲಸೊಂಟದ ಭಾಗದಲ್ಲಿ ಹೆಚ್ಚು ಪೆಟ್ಟು ಸಹ ಬಿದ್ದಿತ್ತು. ಬಿಗ್ ಬಾಸ್ ಮನೆಗೆ ಹೋದಮೇಲೆ ರೆಸ್ಟ್ ಇಲ್ಲದೇ ಮತ್ತೆ ನೋವು ಹೆಚ್ಚಾಗಿದೆ. ತಮ್ಮ ರೆಗ್ಯುಲರ್ ಡಾಕ್ಟರ್ ಬಳಿ ತಪಾಸಣೆ ಮಾಡಿಸಲು ಓಂ ಪ್ರಕಾಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದು ರೆಗ್ಯುಲರ್ ಆಗಿ ತೋರಿಸುತ್ತಿದ್ದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋದಮೇಲೆ ಓಂ ಪ್ರಕಾಶ್ ರಾವ್ ಅವರ ಬಿಪಿ ಮತ್ತು ಶುಗರ್ ಕೂಡ ಹೆಚ್ಚಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಓಂ ಪ್ರಕಾಶ್ ರಾವ್ ಅವರಿಗೆ ವಾರಕ್ಕೆ ಒಮ್ಮೆ ಫಿಸಿಯೋಥೆರಪಿ ಕೂಡ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಎರಡು ವಾರ ಸಂಪೂರ್ಣ ರೆಸ್ಟ್ ಮಾಡಲು ಕೂಡ ಸಲಹೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಚಿಕಿತ್ಸೆಯನ್ನ ಸಹ ಪಡೆಯುತ್ತಿದ್ದಾರೆ. ನೋವು ಬಿಟ್ಟು ಬಿಟ್ಟು ಬರುತ್ತಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ. ರೆಸ್ಟ್ ತೆಗೆದುಕೊಳ್ಳದೇ ಇದ್ದರೆ ಆಪರೇಷನ್ ಕೂಡ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

