ನವದೆಹಲಿ: ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodriguez) ಅವರು ಇಂದು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಕೂಡ ಉಪಸ್ಥಿತರಿದ್ದರು.
ಈ ಭೇಟಿಗೆ ಮುನ್ನ ಪ್ರಕಟಣೆ ನೀಡಿದ್ದ ವಿದೇಶಾಂಗ ಸಚಿವಾಲಯ, ಭಾರತ ಮತ್ತು ವೆನೆಜುವೆಲಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ ನಡೆಸುವ ಜೊತೆಗೆ ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಔಷಧೋದ್ಯಮ, ಆರೋಗ್ಯ ರಕ್ಷಣೆ, ಸಾರಿಗೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿತ್ತು.

ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಡೆಲ್ಸಿ ರೊಡ್ರಿಗಸ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಈ ವೇಳೆ ದಕ್ಷಿಣ ಅಮೆರಿಕದ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಭೇಟಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದು ಸಂತಸ ತಂದಿದೆ. ಭಾರತ ಮತ್ತು ವೆನೆಜುವೆಲಾ ನಡುವಿನ ದೀರ್ಘಕಾಲದ ಸ್ನೇಹಪೂರ್ಣ ಸಂಬಂಧಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರೊಡ್ರಿಗಸ್ ಅವರ ಭೇಟಿ ಉಭಯ ರಾಷ್ಟ್ರಗಳ ಸಹಕಾರಕ್ಕೆ ಮತ್ತಷ್ಟು ವೇಗ ನೀಡಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವೆನೆಜುವೆಲಾ ನಿಯೋಗಕ್ಕೆ ಶುಭಕೋರಿರುವ ವಿದೇಶಾಂಗ ಸಚಿವಾಲಯ, ಈ ಭೇಟಿಯು ಎರಡೂ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುವುದರ ಜೊತೆಗೆ ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ಚೈತನ್ಯ ತುಂಬಲಿದೆ ಎಂದು ಎಕ್ಸ್ ಜಾಲತಾಣದಲ್ಲಿ ತಿಳಿಸಿದೆ.

ಜೂನ್ 3ರಿಂದ ಜೂನ್ 7ರವರೆಗೆ ಭಾರತ ಪ್ರವಾಸ ಕೈಗೊಂಡಿರುವ ವೆನೆಜುವೆಲಾ ನಿಯೋಗದಲ್ಲಿ ವಿದೇಶಾಂಗ ವ್ಯವಹಾರಗಳು, ಆರ್ಥಿಕತೆ ಮತ್ತು ಹಣಕಾಸು, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಹನ ಮತ್ತು ಮಾಹಿತಿ ಹಾಗೂ ಸಾರಿಗೆ ಸಚಿವರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಈ ಹಿಂದೆ ನಿಗದಿಯಾಗಿದ್ದಂತೆ ಜೂನ್ 1ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಶೃಂಗಸಭೆಯಲ್ಲಿ ಡೆಲ್ಸಿ ರೊಡ್ರಿಗಸ್ ಭಾಗವಹಿಸಬೇಕಾಗಿತ್ತು. ಆದರೆ ಬಳಿಕ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಭಾರತ ಮತ್ತು ವೆನೆಜುವೆಲಾ ನಡುವಿನ ಈ ಉನ್ನತ ಮಟ್ಟದ ಮಾತುಕತೆ ಇಂಧನ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ.













