ನವದೆಹಲಿ: ಭಯ ಹುಟ್ಟಿಸುವ ಉದ್ದೇಶಿದಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆರ್ಥಿಕ ಸುನಾಮಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಂತರಿಕ ದಂಗೆಯ ವಾತಾವರಣ ನಿರ್ಮಾಣವಾಗುತ್ತಿದೆ ಮತ್ತು ಜನರ ಆಕ್ರೋಶವನ್ನು ಹತ್ತಿಕ್ಕಲು ಸರ್ಕಾರವು `ತುರ್ತು ಪರಿಸ್ಥಿತಿ’ ಹೇರಬಹುದು ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ (ಜೂ.3) ಎಚ್ಚರಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಮೊದಲು ಭಯದ ವಾತಾವರಣ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಭೇಟಿಯಾದ ಮೋದಿ, ಎಸ್.ಜೈಶಂಕರ್ – ವೆನೆಜುವೆಲಾದಿಂದ ಇಂಧನ ಖರೀದಿಸುತ್ತಾ ಭಾರತ?
ಕಾಂಗ್ರೆಸ್ (Congress) ಪ್ರಧಾನ ಕಚೇರಿಯಲ್ಲಿ ನಡೆದ ಬುಡಕಟ್ಟು ಘಟಕದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಭೀಕರ ಆರ್ಥಿಕ ಸುನಾಮಿ ಬರಲಿದೆ. ಬೆಲೆಗಳು ಏರಿಕೆಯಾಗುತ್ತಿದ್ದು, ಇದು ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಭಾರತವು ಈವರೆಗೆ ಎದುರಿಸದಂತಹ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಆರ್ಥಿಕತೆಯಿಂದ ದೇಶವನ್ನು ರಕ್ಷಿಸುತ್ತಿದ್ದ ಭಾರತದ ಆರ್ಥಿಕ ರಕ್ಷಣಾ ವ್ಯವಸ್ಥೆಯನ್ನು ಆಡಳಿತಾರೂಢ ಬಿಜೆಪಿ ತೆಗೆದುಹಾಕಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ಎಕ್ಸ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಉತ್ತರಿಸಿದ್ದಾರೆ. ಆರ್ಥಿಕ ರಕ್ಷಣಾ ವ್ಯವಸ್ಥೆಯನ್ನು ತೆಗೆದುಹಾಕಿಲ್ಲ. ಬದಲಿಗೆ ಕಳೆದ ಒಂದು ದಶಕದಲ್ಲಿ ಅವುಗಳನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಈ ಮೂಲಕ ಜಾಗತಿಕವಾಗಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಭಾರತ ಸಜ್ಜಾಗಿದೆ. ರಾಹುಲ್ ಗಾಂಧಿಯವರ ಹೇಳಿಕೆ ತಪ್ಪಲ್ಲ. ಇದು ಕೇವಲ ಭಯಹುಟ್ಟಿಸುವ ಹೇಳಿಕೆ ಎಂದಿದ್ದಾರೆ.ಇದನ್ನೂ ಓದಿ: ಬಿಜೆಪಿ ಸಂಪರ್ಕದಲ್ಲಿ 20 ಟಿಎಂಸಿ ಸಂಸದರು – ಒಡೆದು ಹೋಳಾಗುತ್ತಾ ದೀದಿ ಪಕ್ಷ?
Rahul Gandhi’s claim that India is heading towards an “economic tsunami” because the Government has removed all shock absorbers is not just wrong, it is classic fear-mongering.
If India’s shock absorbers had truly been removed, why is the economy continuing to show resilience… pic.twitter.com/7QZvdL8OPi
— Amit Malviya (@amitmalviya) June 4, 2026
ಒಂದು ವೇಳೆ ಆರ್ಥಿಕ ರಕ್ಷಣಾ ವ್ಯವಸ್ಥೆಯನ್ನು ತೆಗೆದುಹಾಕಿದ್ದರೆ, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ, ಪಶ್ಚಿಮ ಏಷ್ಯಾದ ಭೀಕರ ಸಂಘರ್ಷ, ಪೂರೈಕೆ ಸರಪಳಿಯ ಅಡಚಣೆಗಳು, ಜಾಗತಿಕ ಆರ್ಥಿಕ ಮಂದಗತಿ ನಡುವೆಯೂ ಭಾರತದ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ತೋರಿಸಲು ಹೇಗೆ ಸಾಧ್ಯ? ದೇಶದಲ್ಲಿ ಹೆಚ್ಚಾಗುತ್ತಿರುವ ವಿದ್ಯುತ್ ಬಳಕೆ, ಕಾರು-ಬೈಕ್‌ಗಳ ಮಾರಾಟದಲ್ಲಿನ ಏರಿಕೆ, ಇ-ವೇ ಬಿಲ್ ಸಂಖ್ಯೆ ಹೆಚ್ಚಿರುವುದು, ಹತೋಟಿಯಲ್ಲಿರುವ ಹಣದುಬ್ಬರ, ಗೋದಾಮುಗಳಲ್ಲಿರುವ ಧಾನ್ಯದ ದಾಸ್ತಾನು ಮತ್ತು ವಿದೇಶಿ ಹಣದ ಸಂಗ್ರಹ ಇವೆಲ್ಲವು ಭಾರತದ ಆರ್ಥಿಕತೆ ಎಷ್ಟು ಬಲವಾಗಿದೆ ಎಂದು ತೋರಿಸುತ್ತವೆ. ಇದು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಲಕ್ಷಣಗಳಲ್ಲ, ಬದಲಿಗೆ ಅವುಗಳನ್ನು ಸಕ್ರಿಯವಾಗಿ ಬಲಪಡಿಸುವ ಕ್ರಮಗಳು ಎಂದು ಹೇಳಿದ್ದಾರೆ.
ಇದೇ ವೇಳೆ ಯುಪಿಎ ಸರ್ಕಾರದ ಅವಧಿಯ ಆರ್ಥಿಕ ಸ್ಥಿತಿಯನ್ನು ನೆನಪಿಸಿದ ಅವರು, 2011 ಮತ್ತು 2013ರ ನಡುವೆ ರೂಪಾಯಿ ಮೌಲ್ಯವು ಶೇ.36ರಷ್ಟು ಕುಸಿದಿತ್ತು. ಅಷ್ಟೇ ಅಲ್ಲದೆ, 2004-2014ರ ಅವಧಿಯಲ್ಲಿ ಹಣದುಬ್ಬರವು ಸರಾಸರಿ ಶೇ.8.2ರಷ್ಟಿತ್ತು ಮತ್ತು ಹಲವು ವರ್ಷಗಳ ಕಾಲ ಅದು ಎರಡಂಕಿಯಲ್ಲೇ ಇತ್ತು. ಕೋವಿಡ್ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಪ್ರಸ್ತುತ ಅಸ್ಥಿರತೆಯ ನಡುವೆಯೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಸೌರಶಕ್ತಿಯಲ್ಲಿ ಅಮೆರಿಕಾವನ್ನೇ ಮೀರಿಸಿ, ಜಾಗತಿಕವಾಗಿ 2ನೇ ಸ್ಥಾನಕ್ಕೇರಿದ ಭಾರತ – ಪ್ರಹ್ಲಾದ್ ಜೋಶಿ













