ಕೋಲ್ಕತ್ತಾ: ಮಹಾರಾಷ್ಟದ ಶಿವಸೇನೆಯ ಮಾದರಿಯಲ್ಲಿಯೇ ಇದೀಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (TMC) ಕೂಡ ವಿಭಜನೆಯತ್ತ ಸಾಗುತ್ತಿದೆ. ಟಿಎಂಸಿಯ 20 ಸಂಸದರು ಬಿಜೆಪಿ ಸಂಪರ್ಕದಲ್ಲಿದ್ದು, ಪಕ್ಷ ತೊರೆಯಲು ಸಿದ್ಧರಿದ್ದಾರೆ ಎನ್ನಲಾಗಿದೆ. ಇದು ಬಂಗಾಳದಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿದೆ.
ಟಿಎಂಸಿಯ 41 ಜನ ಸಂಸದರ ಪೈಕಿ ಸುಮಾರು 20 ಜನ ಸಂಸದರು ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದು, ಟಿಎಂಸಿ ತೊರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ 20 ಸಂಸದರು ಟಿಎಂಸಿ ಪಕ್ಷ ತೊರೆದು ಹೊರಬಂದರೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಇಬ್ಭಾಗವುದು ಬಹುತೇಕ ಖಚಿತ. ಇದನ್ನೂ ಓದಿ:ಸೌರಶಕ್ತಿಯಲ್ಲಿ ಅಮೆರಿಕಾವನ್ನೇ ಮೀರಿಸಿ, ಜಾಗತಿಕವಾಗಿ 2ನೇ ಸ್ಥಾನಕ್ಕೇರಿದ ಭಾರತ – ಪ್ರಹ್ಲಾದ್ ಜೋಶಿ
ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ ಬಳಿಕ ಪಕ್ಷದ ಶಾಸಕರು ಮತ್ತು ಸಂಸದರು ಪಕ್ಷವನ್ನ ತೊರೆಯಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಟಿಎಂಸಿ ಸಂಸದರಲ್ಲಿ ಒಡಕು ಉಂಟಾದರೆ ಅದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಹಿನ್ನಡೆಯಾಗುತ್ತದೆ.
ಟಿಎಂಸಿ ಶಾಸಕಾಂಗ ಪಕ್ಷ ವಿಭಜನೆ:
ಬಂಗಾಳದಲ್ಲಿ ತೃಣಮೂಲ ಶಾಸಕಾಂಗ ಪಕ್ಷವು ಈಗಾಗಲೇ ವಿಭಜನೆಯಾಗಿದ್ದು, ಸುಮಾರು 59 ತೃಣಮೂಲ ಕಾಂಗ್ರೆಸ್ ಶಾಸಕರು ಟಿಎಂಸಿಯ ಉಚ್ಛಾಟಿತ ಶಾಸಕ ಋತುಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ಬೆಂಬಲಿಸಿದ್ದರು. ಅದರಂತೆ ವಿಧಾನಸಭಾ ಸ್ಪೀಕರ್ ಅನುಮೋದನೆ ಕೂಡ ಕೊಟ್ಟು ಉಚ್ಛಾಟಿತ ಶಾಸಕರ ಬೆಂಬಲಿಗರ ಬಣವನ್ನು ವಿಪಕ್ಷವಾಗಿ ಮಾನ್ಯತೆಗೊಳಿಸಿದ್ದರು. ಅದಾದ ಬಳಿಕ ಬಂಡಾಯ ಶಾಸಕರು ತಮ್ಮದೇ ನಿಜವಾದ ಟಿಎಂಸಿ ಎಂದು ಘೋಷಿಸಿಕೊಂಡಿದ್ದರು.
ಮುಂಬರುವ ದಿನಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮತ್ತಷ್ಟು ಸಂಸದರು ಟಿಎಂಸಿ ತೊರೆಯಬಹುದು ಎನ್ನಲಾಗಿದೆ. ಇದು ಬಂಡಾಯದ ಬಣಕ್ಕೆ ಬಲ ತುಂಬಲಿದೆ. ಮಮತಾ ಬ್ಯಾನರ್ಜಿ ಈಗ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಪಕ್ಷದಲ್ಲಿನ ಆಂತರಿಕ ಬಿರುಕು, ವಿಪಕ್ಷ ನಾಯಕನ ಆಯ್ಕೆ ಮತ್ತು ಫಿರ್ಹಾದ್ ಹಕೀಮ್‌ನಂತಹ ಪಕ್ಷದ ಪ್ರಮುಖ ನಾಯಕನ ರಾಜೀನಾಮೆ ಮಮತಾ ಬ್ಯಾನರ್ಜಿಯವರ ರಾಜಕೀಯ ಸಂಘಟನೆಯ ಹಿಡಿತಕ್ಕೆ ದೊಡ್ಡ ಆಘಾತ ನೀಡಿವೆ. ಇದನ್ನೂ ಓದಿ:ಭಯೋತ್ಪಾದಕ ಸಂಚು ವಿಫಲಗೊಳಿಸಿದ ಪಂಜಾಬ್ ಪೊಲೀಸ್ – IED ಸಹಿತ ಇಬ್ಬರು ಉಗ್ರರ ಬಂಧನ
ಚುನಾವಣಾ ಸೋಲಿನ ನಂತರ ಟಿಎಂಸಿಯಲ್ಲಿನ ಬಂಡಾಯ ತೀವ್ರಗೊಳ್ಳುತ್ತಿದ್ದು, ಭ್ರಷ್ಟಾಚಾರ ಮತ್ತು ಆರ್.ಜಿ ಕರ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಕೊಲೆ ಪ್ರಕರಣದ ನಿರ್ವಹಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆಡಳಿತರೂಢ ಬಿಜೆಪಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಕಳೆದ ವಾರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕರೆದಿದ್ದ ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.













