ಹಾಸನ: ಜಿಲ್ಲೆಯ ಮಲೆನಾಡು ಭಾಗದ ಭೂಕುಸಿತ (Landslide) ಆತಂಕ ಎದುರಾಗಿದ್ದು, 16 ಸ್ಥಳಗಳಲ್ಲಿ ಪ್ರದೇಶ ಗುರುತು ಮಾಡಲಾಗಿದೆ.
ಹಾಸನ (Hassan) ಜಿಲ್ಲೆಯ ಮಲೆನಾಡು (Malenadu) ಭಾಗ ಹಾಗೂ ಅತೀ ಹೆಚ್ಚು ಮಳೆಯಾಗುವ ಸಕಲೇಶಪುರ ತಾಲೂಕಿನಲ್ಲಿ ಹದಿನಾರು ಸಂಭವನೀಯ ಭೂಕುಸಿತ ಪ್ರದೇಶ ಹಾಗೂ ನಾಲ್ಕು ಪ್ರವಾಹ ಉಂಟಾಗುವ ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ ಅಂತಹ ಸ್ಥಳಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಹತ್ತಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಇದೀಗ ದಿಢೀರ್ ಎಂದು ಮನೆ ಖಾಲಿ ಮಾಡುವಂತೆ ತಾಲೂಕು ಆಡಳಿತದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಮಗೆ ಬದಲಿ ಜಾಗ ಕೊಡಿ ಇಲ್ಲವಾದಲ್ಲಿ ನಮ್ಮ ಪ್ರಾಣ ಹೋದರೂ ಸರಿ ಮನೆ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಹೊಸ ಟ್ವಿಸ್ಟ್ – ಹಿಟ್‌ಮ್ಯಾನ್ ಫ್ಯಾನ್ಸ್‌ಗೆ ಸಿಗುತ್ತಾ ಗುಡ್‌ನ್ಯೂಸ್?
ಪ್ರತಿ ವರ್ಷ ಮಳೆಗಾಲ ಆರಂಭವಾದರೆ ಸಾಕು. ಸಕಲೇಶಪುರ (Sakaleshpura) ತಾಲೂಕಿನಲ್ಲಿ ಭೂಕುಸಿತವಾಗಿ ಹಲವು ಅನಾಹುತಗಳು ಸಂಭವಿಸುತ್ತವೆ. ಎಚ್ಚೆತ್ತ ಜಿಲ್ಲಾ ಹಾಗೂ ತಾಲೂಕು ಆಡಳಿತ ಸಂಭವನೀಯ ಭೂಕುಸಿತ ಹಾಗೂ ಪ್ರವಾಹ ಉಂಟಾಗುವ ಸ್ಥಳಗಳನ್ನು ಗುರುತಿಸಿದೆ. ಐವತ್ತು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಜನ ಬದುಕು ಸಾಗಿಸುತ್ತಿದ್ದಾರೆ. ಆದರೆ ಸುರಕ್ಷತೆ ದೃಷ್ಟಿಯಿಂದ ಬೇರೆಡೆಗೆ ತೆರಳುವಂತೆ ತಾಲೂಕು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಮಗೆ ಬದಲಿ ಜಾಗ ಕೊಡಿ ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತೇವೆ. ಇಲ್ಲಾ ನೀವೇ ಬಾಡಿಗೆ ಮನೆ ಕೊಡಿಸಿ ಪ್ರತಿ ತಿಂಗಳು ಹಣ ಕಟ್ಟಿ ಎಂದಿದ್ದಾರೆ.
ಮನೆ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿ ಮನೆ ತೆರವುಗೊಳಿಸಿ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಸಾವು ನೋವುಗಳು ಸಂಭವಿಸುತ್ತವೆ ಎಂದು ಎಚ್ಚರಿಸಲಾಗಿತ್ತು. ಆದರೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಮನೆ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡಿ ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಪ್ರತಿ ವರ್ಷ ಮಳೆಗಾಲ ಆರಂಭವಾದರೆ ಸಾಕು ಸಕಲೇಶಪುರ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಜೀವ ಭಯ ಕಾಡುತ್ತದೆ. ಆದರೆ ಏಕಾಏಕಿ ಯಾವುದೇ ಪರಿಹಾರ ನೀಡದೇ ಸರ್ಕಾರಿ ಜಾಗ ಎನ್ನುವ ಕಾರಣಕ್ಕೆ ಮನೆ ಖಾಲಿ ಮಾಡಿ ಎನ್ನುತ್ತಿರುವುದು ಸರಿಯಲ್ಲ. ಪರಿಹಾರ ಅಥವಾ ಬದಲಿ ಜಾಗ ನೀಡುವವರೆಗೂ ಮನೆ ಖಾಲಿ ಮಾಡುವುದಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಬಗೆಹರಿಯಬೇಕು: ಪತ್ನಿ ಬಗ್ಗೆ ಹೆಚ್‌ಡಿಡಿ ಮಾತು
