ತೆಲುಗಿನ ಬಹು ನಿರೀಕ್ಷಿತ ‘ಪೆದ್ದಿ'(Peddi) ಸಿನಿಮಾ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಈಗಾಗಲೇ ಜಾಹ್ನವಿ ಕಪೂರ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದ ಚಿತ್ರಕ್ಕೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ.
‘ಪೆದ್ದಿ’ ಚಿತ್ರದ ನಿರ್ಮಾಣ ಸಂಸ್ಥೆ, ನಿರ್ದೇಶಕ ಬುಚ್ಚಿಬಾಬು ಹಾಗೂ ಸೆನ್ಸಾರ್ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಂಧ್ರಪ್ರದೇಶದ ಮಾನ್ಯಂ ಮತ್ತು ವಿಜಯನಗರಂ ಜಿಲ್ಲೆಯ ಎಸ್‌ಪಿ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಚಿತ್ರದಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎಂದು ಬುಡಕಟ್ಟು ಜನಾಂಗದ ಮುಖಂಡರು ಆರೋಪಿಸಿದ್ದಾರೆ. ಈ ಪದಗಳು ಜನಾಂಗದ ಭಾವನೆಗಳಿಗೆ ಧಕ್ಕೆ ತರುವಂತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್ – ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಸಿಐಡಿ ಶಾಕ್!
ಚಿತ್ರದಲ್ಲಿ ಇಂತಹ ಸಂಭಾಷಣೆಗಳನ್ನು ಸೇರಿಸಿದ ಚಿತ್ರತಂಡದ ವಿರುದ್ಧ ಹಾಗೂ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
ಆದರೆ ಈ ಪ್ರಕರಣದಲ್ಲಿ ನಟ ರಾಮ್‌ಚರಣ್ ಹೆಸರು ಸೇರಿಲ್ಲ. ಚಿತ್ರದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಈ ವಿವಾದದಿಂದ ರಾಮ್‌ಚರಣ್ ಸದ್ಯಕ್ಕೆ ಬಚಾವಾಗಿದ್ದಾರೆ.ಇದನ್ನೂ ಓದಿ:ಮಹಿಳಾ ಅಭಿಮಾನಿಯ ನಡೆಗೆ ಬೆಚ್ಚಿಬಿದ್ದ ರಾಮ್ ಚರಣ್
‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಡುವೆಯೇ ಒಂದರ ಹಿಂದೆ ಒಂದರಂತೆ ವಿವಾದಗಳು ಎದುರಾಗುತ್ತಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
