ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಸ್ ನೀಡಲು ಇಂದು (ಆ. 17) ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ಇದೆ.

ಈಗಾಗಲೇ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಗಣತಿ ನಮೂನೆ ಪಡೆದಿದ್ದರೆ, ಅದರಲ್ಲಿ ಬೇಕಾದ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಮಾಡಿ ಇಂದು ಸಂಜೆ 4 ಗಂಟೆಯೊಳಗೆ ಸಂಬಂಧಪಟ್ಟ BLOಗೆ ವಾಪಸ್ ನೀಡಬೇಕು.
ಹೆಸರು ರದ್ದಾಗಿದ್ದರೆ ಏನು ಮಾಡಬೇಕು?
SIR ಪ್ರಕ್ರಿಯೆಯಲ್ಲಿ ಕೆಲವು ಅರ್ಹ ಮತದಾರರ ಹೆಸರನ್ನು ಎ-ಆಪ್ಟೆಂಟ್(Absent) , ಎಸ್-ಶಿಫ್ಟ್ (Permanently Shifted), ಡಿ-ಡೆತ್ (Death), ಡಿ-ಡ್ಯುಪ್ಲಿಕೇಟ್ (Duplicate) ಮತ್ತು (ಒ-ಅದರ್ಸ್) Others ವರ್ಗಗಳಲ್ಲಿ ಸೇರಿಸಲಾಗಿದೆ. ನಿಮ್ಮ ಹೆಸರೂ ಈ ಪಟ್ಟಿಗೆ ಸೇರಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಸಂಬಂಧಪಟ್ಟ BLO ಅಥವಾ ಮತದಾರರ ನೋಂದಣಾಧಿಕಾರಿ (ERO) ಅವರನ್ನು ಸಂಪರ್ಕಿಸಿ ಗಣತಿ ನಮೂನೆ ಪಡೆದು, ಅಗತ್ಯ ಮಾಹಿತಿ ನೀಡಿ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಹೆಸರು ಮುಂದಿನ ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
1.08 ಕೋಟಿ ಮತದಾರರ ಹೆಸರು ಡಿಲೀಟ್ ಆಗುವ ಸಾಧ್ಯತೆ
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. SIR ಪ್ರಕ್ರಿಯೆಯಲ್ಲಿ ಭಾನುವಾರ ಸಂಜೆ 4 ಗಂಟೆಯವರೆಗೆ 1,08,34,595 ಮತದಾರರನ್ನು (19.55%) ASDDO ವರ್ಗಕ್ಕೆ ಸೇರಿಸಲಾಗಿದೆ. ಇದರಲ್ಲಿ 15,30,449 ಮಂದಿ Absent, 65,62,586 ಮಂದಿ ಪರ್ಮನೆಂಟ್ಲಿ ಶಿಫ್ಟೆಡ್, 16,38,600 ಮಂದಿ ಡೆತ್, 7,07,095 ಮಂದಿ ಡ್ಯುಪ್ಲಿಕೇಟ್‌ಮತ್ತು 3,95,865 ಮಂದಿ ಸದರ್ಸ್ ವರ್ಗದಲ್ಲಿದ್ದಾರೆ.
ಈ 1.08 ಕೋಟಿ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗುವ ಸಾಧ್ಯತೆ ಇದೆ. ಉಳಿದ 4,45,97,719 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಇರಲಿದೆ. ಇದನ್ನೂ ಓದಿ: ಶ್ರದ್ಧಾ-ಭಕ್ತಿಯ ಆರಾಧನೆ; ಕರಾವಳಿ ಕರ್ನಾಟಕದಲ್ಲಿ ನಾಗರ ಪಂಚಮಿ ಆಚರಣೆ ವಿಶೇಷತೆ ಏನು?
ಸ್ಥಳಾಂತರವಾಗಿದ್ದರೆ Form 6 ಮೂಲಕ ಹೆಸರು ಸೇರಿಸಬಹುದು
ASDDO ವರ್ಗದಲ್ಲಿರುವ 1.08 ಕೋಟಿ ಮತದಾರರ ಪೈಕಿ 65.62 ಲಕ್ಷ ಮಂದಿಯನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಇವರು ಅಗತ್ಯ ದಾಖಲೆಗಳೊಂದಿಗೆ Form 6 ಸಲ್ಲಿಸಿದರೆ, ERO ಪರಿಶೀಲನೆ ನಡೆಸಿ ಅರ್ಹತೆ ಇದ್ದರೆ ಮತದಾರರ ಪಟ್ಟಿಗೆ ಮತ್ತೆ ಹೆಸರು ಸೇರಿಸಬಹುದು. ಇದುವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದವರಿಗೂ Form 6 ಸಲ್ಲಿಸಲು ಅವಕಾಶ ಇದೆ.
ಆ.24ಕ್ಕೆ ಕರಡು ಪಟ್ಟಿ ಪ್ರಕಟ
BLOಗಳು ಅರ್ಹ ಮತದಾರರನ್ನೂ ASDDO ವರ್ಗಕ್ಕೆ ಸೇರಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ SIR ವೇಳಾಪಟ್ಟಿಯನ್ನು ಎರಡು ಬಾರಿ ಪರಿಷ್ಕರಿಸಿ ರೋಲ್‌ಬ್ಯಾಕ್‌ಗೆ ಅವಕಾಶ ನೀಡಿದೆ.
ಮನೆ-ಮನೆ ಭೇಟಿ ಮತ್ತು ರೋಲ್‌ಬ್ಯಾಕ್‌ಗೆ ನೀಡಿರುವ ಸಮಯ ಆ. 17ಕ್ಕೆ ಮುಕ್ತಾಯವಾಗಲಿದೆ. ಬಳಿಕ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಮೂವರ ಎನ್‌ಕೌಂಟರ್ ಕೇಸ್ – ಮೃತರ ಜೊತೆಗೆ ಹೋಗಿದ್ದ ಮಹಿಮಾದಾಸ್ ನಾಪತ್ತೆ
ಆ. 24ರಿಂದ ಸೆಪ್ಟೆಂಬರ್ 23ರವರೆಗೆ ಹೆಸರು ಸೇರ್ಪಡೆ, ತಿದ್ದುಪಡಿ ಸೇರಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ನಂತರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಹೀಗಾಗಿ ನಿಮ್ಮ ಹೆಸರು ರದ್ದಾಗಿದೆಯೇ ಅಥವಾ ಯಾವ ವರ್ಗದಲ್ಲಿ ಸೇರಿಸಲಾಗಿದೆ ಎಂಬುದನ್ನು ಈಗಲೇ ಪರಿಶೀಲಿಸಿಕೊಳ್ಳಿ. ಇಂದು ಸಂಜೆ 4 ಗಂಟೆಯೊಳಗೆ ಅಗತ್ಯ ಕ್ರಮ ಕೈಗೊಂಡರೆ ಮುಂದೆ ಎದುರಾಗುವ ಸಮಸ್ಯೆ ತಪ್ಪಿಸಿಕೊಳ್ಳಬಹುದು.
