ನಾಗರ ಪಂಚಮಿ (Nagara Panchami) ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗದೇವತೆಯನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ. ಭಿನ್ನತೆಗೆ ಹೆಸರಾದ ಭಾರತದಲ್ಲಿ ಹಬ್ಬ ಆಚರಣೆಗಳು ಕೂಡ ಭಿನ್ನವಾಗಿರುತ್ತವೆ. ಕರ್ನಾಟಕದ ವಿವಿಧ ಭಾಗಗಳಲ್ಲೂ ಜನತೆ ತಮ್ಮ ಸಂಸ್ಕೃತಿಗೆ ಅನುಗುಣವಾಗಿ ಹಬ್ಬ ಮಾಡುತ್ತಾರೆ. ಕರ್ನಾಟಕ ಕರಾವಳಿ (Coastal Karnataka) ಭಾಗದಲ್ಲಿ ನಾಗರ ಪಂಚಮಿ ಆಚರಣೆ ಭಿನ್ನ ಮತ್ತು ವಿಶೇಷ. ಶ್ರದ್ಧಾ ಭಕ್ತಿ ಮತ್ತು ಉತ್ಸಾಹದಿಂದ ಹಬ್ಬ ಆಚರಿಸಲಾಗುತ್ತದೆ. ಈ ಪ್ರದೇಶವು ಹಲವಾರು ನಾಗಬನಗಳು ಅಥವಾ ನಾಗಸ್ಥಾನಗಳ ಹೊಂದಿದೆ. ಪವಿತ್ರ ದೇವಾಲಯಗಳಿಗೆ ನೆಲೆಯಾಗಿದೆ. ಶಿಲೆಯಲ್ಲಿ ಅರಳಿರುವ ನಾಗ ಮೂರ್ತಿಗಳಿಗೆ ಈ ಶುಭ ದಿನದಂದು ಜನತೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಕರಾವಳಿಯಲ್ಲಿ ನಾಗದೇವರ ಆರಾಧನೆಗೆ ಮಹತ್ವ ಏಕೆ?
ವಿಷ್ಣುವಿನ ಅವತಾರ ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆಯುತ್ತಾನೆ. ಆದರೆ, ಅದು ಉಪಯುಕ್ತವಲ್ಲದ ಬರಡು ಭೂಮಿಯಾಗಿರುತ್ತದೆ. ಅದನ್ನು ಸಮೃದ್ಧ ಭೂಮಿಯನ್ನಾಗಿ ಮಾಡಲು ನಾಗ ರಾಜನನ್ನು ಪರಶುರಾಮ ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆ ಆಲಿಸಿ, ನಾಗಗಳು ತಮ್ಮ ದೇಹವನ್ನು ಪಣಕ್ಕಿಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ತಳದಲ್ಲಿದ್ದ ಫಲವತ್ತಾದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ. ತುಳುನಾಡನ್ನು ಕಟ್ಟುವ ಕಾಯಕದಲ್ಲಿ ನಾಗಗಳಿಗೆ ದೇಹದಲ್ಲಿ ಗಾಯಗಳಾಗುತ್ತವೆ. ಹಾವುಗಳ ಆರೈಕೆಗೆ ತುಳುವರು ಮುಂದಾಗುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ಕುಲದೇವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಭಕ್ತಿ-ಭಾವದ ಆಚರಣೆಯಾಗುತ್ತದೆ. ಇದನ್ನೂ ಓದಿ: ಶ್ರಾವಣ ಮಾಸದ ಮೊದಲ ಭಕ್ತಿ, ಬಾಂಧವ್ಯದ ಹಬ್ಬ ನಾಗರ ಪಂಚಮಿ

ನಾಗದೇವರಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ
ಭಕ್ತರು ಬೆಳಗಿನ ಜಾವದಿಂದಲೇ ಈ ಸ್ಥಳಗಳಿಗೆ ಬರಲು ಪ್ರಾರಂಭಿಸುತ್ತಾರೆ. ಅಕ್ಕಿ, ಹಾಲು, ತೆಂಗಿನಕಾಯಿ, ಎಳನೀರು, ಬಾಳೆಹಣ್ಣು, ಅರಿಶಿನ ಪುಡಿ (ಹಲ್ದಿ) ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. ಪ್ರತಿ ದೇವಾಲಯದಲ್ಲಿ ಪುರೋಹಿತರು ಕಾಣಿಕೆಗಳನ್ನು ಜೋಡಿಸಿ, ಹಾವಿನ ಕಲ್ಲಿನ ಪ್ರತಿಮೆಗಳ ಮೇಲೆ ತೆಂಗಿನ ನೀರು ಮತ್ತು ಹಾಲನ್ನು ಅರ್ಪಿಸುತ್ತಾರೆ. ನಂತರ ಕಾಣಿಕೆಗಳ ಒಂದು ಭಾಗವನ್ನು ಪ್ರಸಾದ (ಆಶೀರ್ವಾದ ಆಹಾರ)ವಾಗಿ ಭಕ್ತರಿಗೆ ಹಂಚುತ್ತಾರೆ.
ಕರಾವಳಿ ಭಾಗವನ್ನು ನಾಗನ ಮೂಲ ಕ್ಷೇತ್ರ ಎಂದು ಕರೆಯಲಾಗುತ್ತದೆ. ಆದ್ದರಿಂದ ಇಲ್ಲಿನ ಜನತೆಗೆ ನಾಗರ ಪಂಚಮಿ, ನಾಗ ದೇವರೆಂದರೆ ಶ್ರದ್ಧೆ-ಭಕ್ತಿ ಜಾಸ್ತಿ. ಈ ಪವಿತ್ರ ಹಬ್ಬದಂದು ನಗರ ಪ್ರದೇಶಗಳಲ್ಲಿ ವಾಸವಾಗಿರುವ ಕರಾವಳಿಗರು ಹಳ್ಳಿಗಳಿಗೆ ತೆರಳಿ ತಮ್ಮ ಮೂಲ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ವರ್ಷಕ್ಕೊಮ್ಮೆ ತಮ್ಮ ಮೂಲ ನಾಗನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನೂ ಓದಿ: Nagara Panchami| ಕಾಳಿಂಗನ ಅಹಂಕಾರವನ್ನು ಕೃಷ್ಣ ಮುರಿದಿದ್ದು ಹೇಗೆ?
ನಾಗಬನಗಳಲ್ಲಿ ವಿಶೇಷ ಪೂಜೆ
ನಾಗಬನಗಳೆಂದರೆ ಪರಿಸರ ಸಂರಕ್ಷಣೆಗೆ ಮೂಲ ಕೇಂದ್ರಗಳು. ಕರ್ನಾಟಕದ ಕರಾವಳಿ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ) ಮತ್ತು ಮಲೆನಾಡು ಭಾಗಗಳಲ್ಲಿ ಕಾಣಸಿಗುವ ಪವಿತ್ರ ವನಗಳು. ನಾಗದೇವರ ಹೆಸರಿನಲ್ಲಿ ಕಾಡು ಬೆಳೆಸಿ, ನಾಗನ ಕಲ್ಲುಗಳನ್ನು ಇರಿಸಿ ಪೂಜಿಸುತ್ತಾರೆ. ಪ್ರತಿ ಪಂಚಮಿಗೂ ಇಲ್ಲಿ ಭಕ್ತರಿಂದ ವಿಶೇಷ ಪೂಜೆಗಳು ಸಲ್ಲುತ್ತವೆ. ಮರಗಳನ್ನು ಕಡಿಯದೆ ಪರಿಸರವನ್ನು ರಕ್ಷಿಸುವ ಈ ಜಾಗಗಳು, ಅಪರೂಪದ ಜೀವವೈವಿಧ್ಯತೆ ತಾಣಗಳಾಗಿವೆ. ಉಡುಪಿ ಜಿಲ್ಲೆ ನಾಗ ಕ್ಷೇತ್ರಗಳಲ್ಲಿ ಪಂಚಮಿಯಂದು ಲಕ್ಷಾಂತರ ಭಕ್ತರು ತನು ಅರ್ಪಿಸುತ್ತಾರೆ. ಸೂರ್ಯೋದಯಕ್ಕೂ ಮುನ್ನವೇ ಜನರು ಬನಗಳಿಗೆ ತೆರಳಿ ಪೂಜೆ ನೆರವೇರಿಸುತ್ತಾರೆ.
ಪಂಚಮಿಯಂದು ನಾಗದೇವರಿಗೆ ಪ್ರಿಯವಾದ ಹಾಲು, ಎಳನೀರು, ಪಿಂಗಾರದ ಹೂ, ಅರಸಿನ, ಜೇನುತುಪ್ಪ, ಅಕ್ಕಿ, ಊದುಬತ್ತಿ, ಅರಳು, ಕೇದಿಗೆ ಹೂವುಗಳನ್ನು ಕೊಟ್ಟು ಅರ್ಚಕರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗರಕಲ್ಲಿಗೆ ಹೂವು, ಅರಸಿನ, ಹಾಲು, ಜೇನುತುಪ್ಪ ಅರ್ಪಿಸಿ ಕೈ ಮುಗಿಯುತ್ತಾರೆ. ಅರಸಿನ ಎಲೆಯಿಂದ ವಿಶೇಷ ತಿನಿಸು ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ನಂತರ ಪ್ರಸಾದವನ್ನು ಭಕ್ತರು ಸ್ವೀಕರಿಸುತ್ತಾರೆ.
ಅರಿಶಿನ ಎಲೆ ಸಿಹಿ ಕಡುಬು ಸ್ಪೆಷಲ್
ನಾಗರ ಪಂಚಮಿ ಹಬ್ಬದಂದು ಕರಾವಳಿಯಲ್ಲಿ ಪೂಜೆಯ ಜೊತೆಗೆ ತಿನಿಸಿನಲ್ಲೂ ವಿಶೇಷತೆಗಳಿವೆ. ಈ ಮಂಗಳಕರ ದಿನದಂದು ಯಾವುದೇ ಕರಿದ ಅಥವಾ ಉಪ್ಪು ಆಹಾರವನ್ನು ಕರಾವಳಿಯಲ್ಲಿ ತಯಾರಿಸುವುದಿಲ್ಲ. ಬದಲಾಗಿ ಎಳ್ಳುಂಡೆ ಸೇರಿದಂತೆ ಇತರೆ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸುತ್ತಾರೆ. ಅದರಲ್ಲೂ ತುಳುನಾಡಿನ ಜನರು ಅರಿಶಿನ ಎಲೆ ಸಿಹಿ ಕಡುಬು ಮಾಡುತ್ತಾರೆ. ಇದು ನಾಗರ ಪಂಚಮಿ ಹಬ್ಬದ ಸ್ಪೆಷಲ್ ಎಂದೇ ಪ್ರಸಿದ್ಧಿ.
ಕರಾವಳಿಯ ಎಲ್ಲಾ ದೇವಾಲಯಗಳಲ್ಲೂ ಅಲ್ಲಿನ ಆರಾಧ್ಯ ದೇವರ ಜೊತೆಗೆ ನಾಗನಿಗೆ ಪ್ರತ್ಯೇಕ ಕಟ್ಟೆಗಳನ್ನು ಕಟ್ಟಿ ಪೂಜಿಸಲಾಗುತ್ತದೆ. ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸೇರಿದಂತೆ ಹೆಚ್ಚಿನ ದೇವಾಲಯಗಳಲ್ಲಿ ನಾಗಾರಾಧನೆಗೆ ಮಹತ್ವವನ್ನು ನೀಡಲಾಗುತ್ತದೆ. ನಾಗರ ಪಂಚಮಿ ಹಬ್ಬದಂದು ತುಳುನಾಡಿನ ಪ್ರತಿ ಕುಟುಂಬವೂ ನಾಗನ ವಿಗ್ರಹಗಳಿಗೆ ಹಾಲು, ಸೀಯಾಳಾಭಿಷೇಕ ಮಾಡುವ ಮೂಲಕ ನಾಗನ ಮೇಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಮೆರೆಯುತ್ತವೆ.
