ಶ್ರೀಕೃಷ್ಣನು ಶ್ರಾವಣ ಮಾಸದಲ್ಲಿ ಯಮುನಾ ನದಿಯಲ್ಲಿದ್ದ ವಿಷಕಾರಿ ಕಾಳಿಂಗ(Kalinga) ಸರ್ಪದ ಅಹಂಕಾರವನ್ನು ಮುರಿದು, ನದಿಯನ್ನು ವಿಷಮುಕ್ತಗೊಳಿಸಿ ಕಾಳಿಂಗನಿಗೆ ಅಭಯ ನೀಡಿದ ಪೌರಾಣಿಕ ಘಟನೆಯೇ ಕಾಳಿಂಗ ಮರ್ದನ. ಶ್ರೀಕೃಷ್ಣನ ಈ ವಿಜಯದ ದಿನ ಹಾಗೂ ನಾಗರ ಪಂಚಮಿ(Nagara Panchami) ಹಬ್ಬಕ್ಕೆ ಧಾರ್ಮಿಕವಾಗಿ ಆಳವಾದ ನಂಟು ಹಾಗೂ ನಂಬಿಕೆಯಿದೆ.

ಕಾಳಿಂಗ ಸರ್ಪ ಯಮುನಾ ನದಿಗೆ ಬರುವುದಕ್ಕೆ ಕಾರಣ ಇದೆ. ಈ ಕಥೆ ಬರುವುದು ಭಾಗವತ ಪುರಾಣದಲ್ಲಿ. ರಮಣಕ ದ್ವೀಪದಲ್ಲಿ ಕಾಳಿಂಗ ತನ್ನ ಪರಿವಾರದೊಂದಿಗೆ ವಾಸಿಸುತ್ತಿದ್ದ. ಇಲ್ಲಿ ಸರ್ಪಗಳಿಗೂ ಮತ್ತು ಪಕ್ಷಿರಾಜನಾದ ಗರುಡನಿಗೂ(Garuda) ಒಂದು ಒಪ್ಪಂದವಿತ್ತು. ಅದರಂತೆ ಪ್ರತಿ ತಿಂಗಳೂ ಸರ್ಪಗಳು ಗರುಡನಿಗೆ ಒಂದು ನಿರ್ದಿಷ್ಟ ಜಾಗದಲ್ಲಿ ಆಹಾರದ ರೂಪದಲ್ಲಿ ಕಾಣಿಕೆಯನ್ನು ಅರ್ಪಿಸಬೇಕಾಗಿತ್ತು. ತನಗಿದ್ದ ವಿಷದ ಶಕ್ತಿ ಮತ್ತು ಬಲದ ಅಹಂಕಾರದಿಂದ ಕಾಳಿಂಗನು ಗರುಡನನ್ನು ಗೌರವಿಸಲು ನಿರಾಕರಿಸಿದನು. ಅಷ್ಟೇ ಅಲ್ಲದೆ ಗರುಡನಿಗಾಗಿ ಇಟ್ಟಿದ್ದ ಆಹಾರವನ್ನು ತಾನೇ ತಿಂದು ಗರುಡನಿಗೆ ಸವಾಲು ಹಾಕಿದ್ದ.
ತನ್ನ ಆಹಾರವನ್ನು ತಿಂದು ಸಿಟ್ಟಾದ ಗರುಡ ರಮಣಕ ದ್ವೀಪಕ್ಕೆ ಬಂದು ಕಾಳಿಂಗನ ಮೇಲೆ ಆಕ್ರಮಣ ಮಾಡಿದನು. ಗರುಡನ ಬಲವಾದ ರೆಕ್ಕೆಗಳ ಏಟಿಗೆ ತತ್ತರಿಸಿದ ಕಾಳಿಂಗನು ಪ್ರಾಣಭಯದಿಂದ ಅಲ್ಲಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದು ಯುಮನಾ ನದಿಯಲ್ಲಿ. ಈ ಜಾಗಕ್ಕೆ ಕಾಳಿಂಗ ಬರಲು ಕಾರಣವಿದೆ. ಹಿಂದೆ ಒಮ್ಮೆ ಹಸಿವಿನಿಂದ ಬಳಲುತ್ತಿದ್ದ ಗರುಡನು ಇದೇ ಯಮುನಾ ನದಿಯ ದಡದಲ್ಲಿದ್ದ ಸೌಭರಿ ಮಹರ್ಷಿಗಳ ಆಶ್ರಮದ ಬಳಿ ಬಂದು ಮೀನೊಂದನ್ನು ಹಿಡಿದು ತಿಂದಿದ್ದನು. ಇದರಿಂದ ಕೋಪಗೊಂಡ ಸೌಭರಿ ಮುನಿಗಳು, “ಇನ್ನು ಮುಂದೆ ನೀನೇನಾದರೂ ಈ ಯಮುನಾ ನದಿಯ ಪ್ರದೇಶಕ್ಕೆ ಕಾಲಿಟ್ಟರೆ ತಕ್ಷಣವೇ ನಿನ್ನ ಪ್ರಾಣ ಪಕ್ಷಿ ಹಾರಿಹೋಗುತ್ತದೆ” ಎಂದು ಗರುಡನಿಗೆ ಶಾಪ ನೀಡಿದ್ದರು. ಈ ರಹಸ್ಯವನ್ನು ತಿಳಿದಿದ್ದ ಕಾಳಿಂಗನು ಗರುಡನಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಯಮುನಾ ನದಿಯ ಆಳವಾದ ಮಡುವನ್ನು ತನ್ನ ಸುರಕ್ಷಿತ ನೆಲೆಯನ್ನಾಗಿ ಮಾಡಿಕೊಂಡನು.
ಮೊದಲೇ ಅಹಂಕಾರದಲ್ಲಿದ್ದ ಕಾಳಿಂಗ ಯಮುನಾ ನದಿಯಲ್ಲಿ ವಿಷವನ್ನು ಕಾರಿ ಮಲೀನ ಮಾಡುತ್ತಿದ್ದ. ಕಾಳಿಂಗನ ವಿಷದಿಂದಾಗಿ ಯಮುನಾ ನದಿಯ ನೀರು ಕಪ್ಪಗಾಗಿ, ಕುದಿಯುತ್ತಿತ್ತು. ಈ ನೀರನ್ನು ಕುಡಿದ ಹಸುಗಳು, ಪಕ್ಷಿಗಳು ಮತ್ತು ಗೋಪಾಲಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ತೀರದ ಮರಗಿಡಗಳೂ ಒಣಗಿಹೋಗಿದ್ದವು. ಕಾಳಿಂಗನಿಗೆ ಹೆದರಿ ಇಡೀ ಬೃಂದಾವನದ ಜನ ಕಂಗಾಲಾಗಿದ್ದರು.
ಒಂದು ದಿನ ಕೃಷ್ಣನು ತನ್ನ ಗೋಪಾಲಕ ಸ್ನೇಹಿತರು ಮತ್ತು ಹಸುಗಳ ಹಿಂಡಿನೊಂದಿಗೆ ಯಮುನಾ ನದಿಯ ದಡಕ್ಕೆ ಬಂದಿದ್ದನು. ತೀವ್ರವಾದ ಬಾಯಾರಿಕೆಯಿಂದಾಗಿ ಬಾಲ ಗೋಪಾಲಕರು ಮತ್ತು ಹಸುಗಳು ಯಮುನೆಯ ನೀರನ್ನು ಕುಡಿದವು. ಆ ನೀರನ್ನು ಕುಡಿದ ತಕ್ಷಣ ಕೃಷ್ಣನ ಸ್ನೇಹಿತರು ಮತ್ತು ಹಸುಗಳು ಪ್ರಾಣ ಕಳೆದುಕೊಂಡು ದಡದ ಮೇಲೆ ಬಿದ್ದವು. ತನ್ನವರ ಸ್ಥಿತಿಯನ್ನು ನೋಡಿ ಕೃಷ್ಣನು ತಕ್ಷಣವೇ ತನ್ನ ದಿವ್ಯವಾದ ಸಂಜೀವಿನಿ ದೃಷ್ಟಿಯಿಂದ ಅವರೆಲ್ಲರನ್ನೂ ಮತ್ತೆ ಬದುಕಿಸಿದನು.
ಈ ದುರಂತಕ್ಕೆ ಕಾಳಿಂಗನೇ ಕಾರಣ ಎಂದು ಅರಿತ ಕೃಷ್ಣನು, ಯಮುನಾ ನದಿಯನ್ನು ಮತ್ತು ವೃಂದಾವನದ ಪ್ರಕೃತಿಯನ್ನು ಈ ಭಯಾನಕ ವಿಷದಿಂದ ಮುಕ್ತಗೊಳಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದನು. ಅದಕ್ಕಾಗಿಯೇ ಕೃಷ್ಣನು ನದಿಯ ದಡದಲ್ಲಿದ್ದ ಕದಂಬ ವೃಕ್ಷವನ್ನೇರಿ, ನೇರವಾಗಿ ಕಾಳಿಂಗನಿದ್ದ ಯಮುನಾ ನದಿಯ ಆಳವಾದ ಮಡುವಿಗೆ ಧುಮುಕಿದನು. ಕೃಷ್ಣನ ಸಾಹಸವನ್ನು ಕಂಡು ಕೋಪಗೊಂಡ ಕಾಳಿಂಗನು ತನ್ನ ಬಾಲದಿಂದ ಕೃಷ್ಣನನ್ನು ಬಿಗಿಯಾಗಿ ಸುತ್ತುವರಿದು ವಿಷವನ್ನು ಕಾರಲು ಆರಂಭಿಸಿದನು. ಕೃಷ್ಣನು ಸರ್ಪದ ಸುರುಳಿಯಲ್ಲಿ ಸಿಲುಕಿರುವುದನ್ನು ನೋಡಿ ನದಿಯ ದಡದಲ್ಲಿದ್ದ ಯಶೋದೆ, ನಂದಗೋಪ ಮತ್ತು ಗೋಪಾಲಕರು ಗೋಳಾಡತೊಡಗಿದರು.
ಕೃಷ್ಣನು ತನ್ನ ದೇಹದ ಗಾತ್ರವನ್ನು ವಿಸ್ತರಿಸತೊಡಗಿದನು. ಭಾರ ತಡೆಯಲಾರದೇ ಕಾಳಿಂಗನು ಸುರುಳಿಯನ್ನು ಸಡಿಲಗೊಳಿಸಿದನು. ತಕ್ಷಣವೇ ಕೃಷ್ಣನು ಕಾಳಿಂಗನ ಹೆಡೆಗಳ ಮೇಲೆ ಜಿಗಿದು, ಭೀಕರವಾಗಿ ನೃತ್ಯ ಮಾಡಲು ಆರಂಭಿಸಿದನು. ಕೃಷ್ಣನ ಪಾದಗಳ ಭಾರಕ್ಕೆ ಕಾಳಿಂಗನ ಹೆಡೆಗಳು ಜಜ್ಜಲ್ಪಟ್ಟು, ಆತ ರಕ್ತವನ್ನು ಕಾರುತ್ತಾ ಮೂರ್ಛೆ ಹೋಗುವ ಸ್ಥಿತಿ ತಲುಪಿದನು. ಈ ಸಂದರ್ಭದಲ್ಲಿ ಕಾಳಿಂಗನ ಪತ್ನಿಯರಾದ ನಾಗಕನ್ನಿಕೆಯರು ಕೃಷ್ಣನ ಮುಂದೆ ಕೈಮುಗಿದು, ತಮ್ಮ ಪತಿಯ ಪ್ರಾಣವನ್ನು ಭಿಕ್ಷೆಯಾಗಿ ನೀಡುವಂತೆ ಬೇಡಿಕೊಂಡರು.
ಕೃಷ್ಣನು ಕಾಳಿಂಗನ ಪ್ರಾಣವನ್ನು ಉಳಿಸಿ, “ನೀನು ತಕ್ಷಣವೇ ಯಮುನಾ ನದಿಯನ್ನು ಬಿಟ್ಟು ನಿನ್ನ ಮೂಲ ಸ್ಥಾನವಾದ ರಮಣಕ ದ್ವೀಪಕ್ಕೆ ಹೊರಟುಹೋಗು” ಎಂದು ಆಜ್ಞಾಪಿಸಿದನು. ನಿನ್ನ ಹೆಡೆಗಳ ಮೇಲೆ ತನ್ನ ಪಾದದ ಗುರುತುಗಳಿರುವುದರಿಂದ ಶತ್ರುವಾದ ಗರುಡನು ಇನ್ನು ಮುಂದೆ ನಿನಗೆ ತೊಂದರೆ ಕೊಡುವುದಿಲ್ಲ ಎಂದು ಕೃಷ್ಣ ಅಭಯ ನೀಡಿದನು. ಕಾಳಿಂಗನು ಯಮುನೆಯನ್ನು ಬಿಟ್ಟು ಹೋದ ನಂತರ ನದಿಯ ನೀರು ಮತ್ತೆ ಪರಿಶುದ್ಧವಾಯಿತು. ಗೋಕುಲದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಈ ಕಥೆಯ ಹಿಂದೆ ಆಧ್ಯಾತ್ಮಿಕ ಸಂದೇಶ ಸಹ ಇದೆ. ಹೆಡೆಗಳಿರುವ ಕಾಳಿಂಗ ಸರ್ಪವು ಮಾನವನಲ್ಲಿರುವ ಅಹಂಕಾರ, ಕ್ರೋಧ, ದುಷ್ಟ ಆಲೋಚನೆಗಳು ಸಂಕೇತವಾಗಿದೆ. ಮನುಷ್ಯನ ಅಹಂಕಾರಕ್ಕೆ ನೂರಾರು ಮುಖಗಳಿರುತ್ತವೆ ಎಂಬುದನ್ನು ನೂರಾರು ಹೆಡೆಗಳು ಸೂಚಿಸುತ್ತವೆ. ಅಹಂಕಾರ ಮತ್ತು ಕೆಟ್ಟ ಆಲೋಚನೆಗಳಿಂದ ಮನುಷ್ಯನ ಮನಸ್ಸು (ಯಮುನಾ ನದಿ) ವಿಷಪೂರಿತವಾಗುತ್ತದೆ. ಇದರಿಂದ ಆತನ ಸುತ್ತಲಿನ ಪರಿಸರ ಮತ್ತು ಸಂಬಂಧಗಳೂ ನಾಶವಾಗುತ್ತವೆ.
ಕೃಷ್ಣನು ಸರ್ಪದ ಹೆಡೆಗಳ ಮೇಲೆ ನೃತ್ಯ ಮಾಡುವುದು ಇಂದ್ರಿಯ ನಿಗ್ರಹದ ಸಂಕೇತ. ಅಹಂಕಾರದ ಹೆಡೆಗಳು ಮೇಲೆದ್ದಾಗಲೆಲ್ಲಾ ಭಗವಂತನು ಅದನ್ನು ತುಳಿದು ಹತ್ತಿಕ್ಕುತ್ತಾನೆ. ಭಗವಂತನ ಧ್ಯಾನ ಅಥವಾ ಜ್ಞಾನದ ಮೂಲಕ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹತೋಟಿಗೆ ತರಬಹುದು ಎಂಬುದನ್ನು ಈ ನೃತ್ಯ ಸೂಚಿಸುತ್ತದೆ.
ಎಷ್ಟೇ ಬಲಿಷ್ಠನಾಗಿದ್ದರೂ ಅಹಂಕಾರ ಅಳಿದು ಭಗವಂತನ ಪಾದಕ್ಕೆ ಶರಣಾದಾಗ ಮಾತ್ರ ಜೀವಿಗೆ ಮುಕ್ತಿ ಅಥವಾ ರಕ್ಷಣೆ ಸಿಗುತ್ತದೆ. ಕಾಳಿಂಗನ ಹೆಡೆಯ ಮೇಲೆ ತನ್ನ ಪಾದದ ಗುರುತನ್ನು ಬಿಡುವುದು, ಶರಣಾದ ಜೀವಿಗೆ ಭಗವಂತನು ನೀಡುವ ರಕ್ಷಣೆಯ ಭರವಸೆ. ಯಮುನಾ ನದಿಯನ್ನು ವಿಷಮುಕ್ತಗೊಳಿಸುವ ಮೂಲಕ ಕೃಷ್ಣನು ಪ್ರಕೃತಿ ಮತ್ತು ಪರಿಸರವನ್ನು ಶುದ್ಧವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶವನ್ನು ನೀಡಿದ್ದಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಮನಸ್ಸಿನಲ್ಲಿರುವ ಕಾಳಿಂಗನಂತಹ ದುಷ್ಟ ಆಲೋಚನೆಗಳನ್ನು ಶ್ರೀಕೃಷ್ಣನ ಪಾದ ಕಮಲಗಳ ಸ್ಮರಣೆಯಿಂದ ಹತ್ತಿಕ್ಕಿ, ಮನಸ್ಸನ್ನು ಯಮುನೆಯಂತೆ ಪರಿಶುದ್ಧಗೊಳಿಸುವುದೇ ಈ ಕಥೆಯ ನಿಜವಾದ ಆಧ್ಯಾತ್ಮಿಕ ಸಂದೇಶ.
