ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ.

ನಮ್ಮ ಸನಾತನ ಧರ್ಮದಲ್ಲಿ ನಾಗಗಳಿಗೆ ಅತ್ಯುನ್ನತ ದೈವಿಕ ಸ್ಥಾನವಿದೆ. ಶ್ರೀ ಮಹಾವಿಷ್ಣುವು ಶೇಷನಾಗನ ಮೇಲೆ ಶಯನಿಸಿದರೆ, ಶಿವನು ನಾಗಾಭರಣ ಭೂಷಿತನಾಗಿ ಮೆರೆಯುತ್ತಾನೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಹಾಲಾಹಲ ವಿಷವನ್ನು ಜಗತ್ತಿನ ರಕ್ಷಣೆಗಾಗಿ ಪರಶಿವನು ಸ್ವೀಕರಿಸಿದಾಗ, ಅದರ ಕೆಲವು ಹನಿಗಳು ಭೂಮಿಗೆ ಬಿದ್ದವು. ಅದನ್ನು ಸರ್ಪಗಳು ಆಪೋಷನ ತೆಗೆದುಕೊಂಡವು. ಆ ವಿಷದ ತೀವ್ರ ತಾಪವನ್ನು ತಣಿಸಲು ದೇವತೆಗಳು ಶಿವನಿಗೆ ಹಾಗೂ ನಾಗದೇವತೆಗಳಿಗೆ ಕ್ಷೀರಾಭಿಷೇಕ (ಹಾಲಿನ ಅಭಿಷೇಕ) ಮಾಡಿದರು. ಈ ದಿವ್ಯ ಘಟನೆಯ ಸ್ಮರಣಾರ್ಥವಾಗಿ ಇಂದಿಗೂ ನಾಗರ ಪಂಚಮಿಯಂದು ನಾಗರಕಲ್ಲು ಹಾಗೂ ಹುತ್ತಗಳಿಗೆ ಹಾಲನ್ನು ಎರೆಯುವ ಪರಂಪರೆ ಬೆಳೆದುಬಂದಿದೆ.
ನಾಗರ ಪಂಚಮಿಯಂದು ನಾಗದೇವತೆಯನ್ನು ಮನಃಪೂರ್ವಕವಾಗಿ ಆರಾಧಿಸುವುದರಿಂದ ಜಾತಕದಲ್ಲಿರುವ ಕಾಳಸರ್ಪ ದೋಷ, ರಾಹು-ಕೇತು ದೋಷಗಳು ನಿವಾರಣೆಯಾಗುತ್ತವೆ ಎಂಬ ದೃಢ ನಂಬಿಕೆಯಿದೆ. ಅಷ್ಟೇ ಅಲ್ಲದೆ, ಸರ್ಪಭಯ ದೂರವಾಗಿ ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬುದು ಭಕ್ತರ ಆಳವಾದ ವಿಶ್ವಾಸ.
ನಾಗರ ಪಂಚಮಿ ಎಂದರೆ ಕೇವಲ ಪೂಜೆಯಷ್ಟೇ ಅಲ್ಲ, ಅದು ಒಡಹುಟ್ಟಿದವರ ಪ್ರೀತಿ-ಬಾಂಧವ್ಯವನ್ನು ಬೆಸೆಯುವ ಸೌಹಾರ್ದದ ಹಬ್ಬ. ಈ ದಿನ ಹೆಣ್ಣುಮಕ್ಕಳು ತಮ್ಮ ಸಹೋದರರ ದೀರ್ಘಾಯುಷ್ಯ, ಆಯುರಾರೋಗ್ಯ ಮತ್ತು ಯಶಸ್ಸಿಗಾಗಿ ನಾಗಪ್ಪನಲ್ಲಿ ಪ್ರಾರ್ಥಿಸುತ್ತಾರೆ. ಇದನ್ನೂ ಓದಿ: ನಾಗರ ಪಂಚಮಿ & ನಾಗಬನ – ಧಾರ್ಮಿಕ ನಂಬಿಕೆಯ ಹಿಂದೆ ಇರುವ ಪರಿಸರದ ಕಥೆ
ಮುಂಗಾರು ಮಳೆ ಸುರಿಯುವ ಈ ಅವಧಿಯಲ್ಲಿ, ಗದ್ದೆಗಳಲ್ಲಿ ಬೆಳೆಗಳನ್ನು ನಾಶಮಾಡುವ ಇಲಿ, ಕೀಟಗಳು ಮತ್ತು ಮಿಡತೆಗಳ ಹಾವಳಿ ಹೆಚ್ಚಾಗಿರುತ್ತದೆ. ನಾಗದೇವತೆಯು ಈ ಜೀವಿಗಳನ್ನು ಭಕ್ಷಿಸಿ ರೈತನ ಪೈರನ್ನು ರಕ್ಷಿಸುತ್ತದೆ. ಹೀಗಾಗಿ ಹಾವುಗಳನ್ನು ‘ರೈತನ ಮಿತ್ರ’ ಎಂದು ಕರೆಯಲಾಗುತ್ತದೆ. ಪ್ರಕೃತಿಯ ಸಮತೋಲನ ಕಾಯುವ ಈ ಜೀವಿಗೆ ಗೌರವ ಹಾಗೂ ಕೃತಜ್ಞತೆ ಸಲ್ಲಿಸುವ ಅತ್ಯಂತ ಸುಂದರ ಪರಿಸರಸ್ನೇಹಿ ಹಬ್ಬ ಇದಾಗಿದೆ.
ಈ ದಿನ ಭಕ್ತರು ಮುಂಜಾನೆಯೇ ಎದ್ದು ಹುತ್ತಗಳಿಗೆ ಹಾಗೂ ನಾಗರಕಲ್ಲುಗಳಿಗೆ ಅರಿಶಿನ, ಕುಂಕುಮ, ಹೂವು ಹಾಗೂ ಹಾಲಿನಿಂದ ಭಕ್ತಿಪೂರ್ವಕ ಪೂಜೆ ಸಲ್ಲಿಸುತ್ತಾರೆ. ಪ್ರಿಯವಾದ ತಂಬಿಟ್ಟು, ಎಳ್ಳಿನ ಚಿಗಳಿ ಉಂಡೆ, ಹಸಿ ಅಕ್ಕಿ ಹಾಗೂ ಬೆಲ್ಲದಿಂದ ಮಾಡಿದ ವಿಶೇಷ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಇದನ್ನೂ ಓದಿ: Nagara Panchami| ಕಾಳಿಂಗನ ಅಹಂಕಾರವನ್ನು ಕೃಷ್ಣ ಮುರಿದಿದ್ದು ಹೇಗೆ?
