– ಸುಳ್ಳು ಮಾಹಿತಿ ಕೊಟ್ಟವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಫಾರಂ-7 ದುರ್ಬಳಕೆ ಆರೋಪಿಸಿ ಕಾಂಗ್ರೆಸ್ ಧರಣಿ ನಡೆಸಿದ ಬೆನ್ನಲ್ಲೇ ಫಾರಂ-7 ಅರ್ಜಿಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ಬಲ್ಕ್ ಆಗಿ ಸಲ್ಲಿಕೆಯಾಗುವ ಫಾರಂ-7 ಅರ್ಜಿಗಳನ್ನು ಪರಿಗಣಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಬಿಎ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಲ್ಕ್ ಆಗಿ ಫಾರಂ-7 ಅರ್ಜಿಗಳನ್ನು ಇಆರ್‌ಒಗಳಿಗೆ ಸಲ್ಲಿಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಲ್ಕ್ ಆಗಿ ನೀಡುವ ಫಾರಂ-7 ಅರ್ಜಿಗಳನ್ನು ಇಆರ್‌ಒಗಳು ಸ್ವೀಕರಿಸಬಾರದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮತದಾರರ ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ಫಾರಂ-7 ಬಳಸಲಾಗುತ್ತದೆ. ಆದರೆ, ಈ ಅರ್ಜಿಯ ದುರ್ಬಳಕೆ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಫಾರಂ-7 ಅರ್ಜಿಗಳ ಸಲ್ಲಿಕೆ ಹಾಗೂ ಪರಿಶೀಲನೆ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಬಲ್ಕ್ ಆಗಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದರೆ ಅವುಗಳನ್ನು ಸ್ವೀಕರಿಸದಂತೆ ನಿರ್ದೇಶನ ನೀಡಲಾಗಿದೆ. ಫಾರಂ-7 ಮಾತ್ರವಲ್ಲದೆ, ಫಾರಂ-6, ಫಾರಂ-6ಎ, ಫಾರಂ-7 ಹಾಗೂ ಫಾರಂ-8ರಲ್ಲಿ ಸುಳ್ಳು ಮಾಹಿತಿ ನೀಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಆಯೋಗ ಸೂಚಿಸಿದೆ.
ಜನಪ್ರತಿನಿಧಿತ್ವ ಕಾಯ್ದೆ, 1950ರ ಸೆಕ್ಷನ್ 31 ಅಡಿ ಸುಳ್ಳು ಘೋಷಣೆ ಅಥವಾ ತಪ್ಪು ಮಾಹಿತಿ ನೀಡಿದ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಸೇರಿದಂತೆ ಕಾನೂನಿನಡಿ ನಿಗದಿಪಡಿಸಿರುವ ಶಿಕ್ಷೆಗೆ ಅವಕಾಶವಿದೆ ಎಂದು ಸೂಚಿಸಲಾಗಿದೆ.
ಆದರೆ, ಯಾವುದೇ ಕ್ರಮ ಕೈಗೊಳ್ಳುವ ಮುನ್ನ ರೂಲ್ 20ರ ಅಡಿಯಲ್ಲಿ ವಿಚಾರಣೆ ನಡೆಸುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸಂಬಂಧಪಟ್ಟ ವ್ಯಕ್ತಿಗೆ ವಿಚಾರಣೆಯ ಅವಕಾಶ ನೀಡಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಫಾರಂ-7 ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಗಮನಕ್ಕೆ ಹಲವು ವಿಚಾರಗಳನ್ನು ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

