ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್ (Yash) ತಾವು ಸಂಭಾವನೆ ಪಡೆಯುವ ಬಗ್ಗೆ ಮಾತನಾಡಿದ್ದು ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಸಿನಿಮಾಗಳ ಸಂಭಾವನೆ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ‘ನಾನು ಸಂಭಾವನೆ ಪಡೆಯುವುದಿಲ್ಲ, ಪಾರ್ಟ್ನರ್‌ಶಿಪ್‌ನಲ್ಲಿ ಕೆಲಸ ಮಾಡುತ್ತೇನೆ’ ಎಂದು ಯಶ್ ಹೇಳಿದ್ದಾರೆ.
ಒಂದು ಸಿನಿಮಾಕ್ಕೆ 50 ಕೋಟಿ ರೂ. ಸಂಭಾವನೆ ಕೇಳುತ್ತೀರಂತೆ?’ ಎಂದು ಕಾರ್ಯಕ್ರಮದ ನಿರೂಪಕರು ಕೇಳಿದಾಗ, ಯಶ್ ನಗುತ್ತಲೇ ʼಇಲ್ಲ, ಅದಕ್ಕಿಂತಲೂ ಹೆಚ್ಚು ಪಡೆಯುತ್ತೇನೆʼ ಎಂದು ಹೇಳಿದ್ದಾರೆ. ಬಳಿಕ ತಾವು ಸಂಭಾವನೆ ಪಡೆಯುವ ಬಗೆಯ ಕುರಿತು ವಿವರಿಸಿದ್ದಾರೆ.
ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವಾಗ ಸಾಮಾನ್ಯವಾಗಿ ಸಂಭಾವನೆ ಪಡೆಯುವುದಿಲ್ಲ. ಬದಲಾಗಿ, ಸಿನಿಮಾದಲ್ಲಿ ಪಾರ್ಟ್ನರ್‌ಶಿಪ್‌ನಲ್ಲಿ ಕೆಲಸ ಮಾಡುತ್ತೇನೆ. ‘ಕೆಜಿಎಫ್’ಗಿಂತಲೂ ಮೊದಲಿನಿಂದಲೇ ಇದೇ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಯಶ್ ಹೇಳಿದ್ದಾರೆ.
ನಮ್ಮನ್ನು ನಂಬಿ ಕೆಲವರು ಹಣ ಹಾಕಿರುತ್ತಾರೆ. ನಾನೂ ಅವರ ಜೊತೆ ಸೇರಿಕೊಳ್ಳುತ್ತೇನೆ. ಸಿನಿಮಾ ಗೆದ್ದರೆ ಇಬ್ಬರೂ ಗೆಲ್ಲುತ್ತೇವೆ, ಸೋತರೆ ಇಬ್ಬರೂ ಕಳೆದುಕೊಳ್ಳುತ್ತೇವೆ ಎಂದು ಯಶ್ ಹೇಳಿದ್ದಾರೆ. ಸಿನಿಮಾ ಗೆದ್ದರೂ ಸೋತರೂ ನಿರ್ಮಾಪಕರ ಜೊತೆಗಿನ ಸಂಬಂಧಕ್ಕೆ ನಾನು ಬೆಲೆ ಕೊಡುತ್ತೇನೆ ಎಂದಿದ್ದಾರೆ.
ತಾವು ಕೇವಲ ನಟನಾಗಿ ಮಾತ್ರವಲ್ಲದೆ, ಸಿನಿಮಾದ ಭಾಗವಾಗಿಯೇ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಯಶ್ ಹೇಳಿದ್ದಾರೆ. ಅದಕ್ಕಾಗಿಯೇ ಸಂಭಾವನೆ ತೆಗೆದುಕೊಳ್ಳುವ ಬದಲು ಸಹ-ನಿರ್ಮಾಪಕರಾಗಿ ಸಿನಿಮಾದಲ್ಲಿ ಪಾಲುದಾರರಾಗುತ್ತೇನೆ ಎಂದು ವಿವರಿಸಿದ್ದಾರೆ.
ಸಿನಿಮಾ ಹಿಟ್ ಆದಾಗ ಲಾಭ ಬರುತ್ತದೆ. ಆದರೆ, ಆ ಲಾಭವನ್ನು ಪಡೆದುಕೊಂಡು ಸುಮ್ಮನೆ ಕೂರುವುದಿಲ್ಲ. ಅದೇ ಹಣ ಮತ್ತು ಅನುಭವವನ್ನು ಮುಂದಿನ ಸಿನಿಮಾಗಳಿಗೆ ಬಳಸಿಕೊಂಡು ಇನ್ನೂ ಒಳ್ಳೆಯ ಸಿನಿಮಾ ನೀಡಬೇಕು ಎಂಬುದು ತಮ್ಮ ಉದ್ದೇಶ ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟಿ ಅನನ್ಯಾ ರಾಜ್ ನಿಧನ; ತಿಂಗಳ ನಂತರ ಬೆಳಕಿಗೆ ಬಂತು ಸಾವಿನ ಸುದ್ದಿ
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಯಶ್, ಇದೀಗ ‘ಟಾಕ್ಸಿಕ್’ ಮೂಲಕ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಸಿದ್ಧರಾಗಿದ್ದಾರೆ. ಅವರ ಸಂಭಾವನೆ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ಯಶ್ ನೀಡಿರುವ ಈ ಸ್ಪಷ್ಟನೆ ಅಭಿಮಾನಿಗಳ ಗಮನ ಸೆಳೆದಿದೆ.ಇದನ್ನೂ ಓದಿ: ನಲಪಾಡ್ ಮದುವೆ ಸಂಭ್ರಮ – ಡಿಕೆಶಿ, ಸುದೀಪ್, ಯಶ್ ಭಾಗಿ
