ಬೆಂಗಳೂರು: ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಬೆಳ್ಳಂದೂರು ಪೊಲೀಸರು (Bellandur Police) ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಅನ್ನು ಜಪ್ತಿ ಮಾಡಿದ್ದಾರೆ.

ಕಾಮಗಾರಿಯ ವೇಳೆ ಬಂಡೆಗಳನ್ನ ಸ್ಫೋಟಿಸಲು ಯಾವುದೇ ಪರವಾನಗಿ ಇಲ್ಲದೇ ಜಿಲೆಟಿನ್ (Gelatin sticks) ಬಳಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿ ಜಿಲೆಟಿನ್‌ನ್ನು ಜಪ್ತಿ ಮಾಡಿದ್ದಾರೆ.

ಬೆಳ್ಳಂದೂರು ಠಾಣಾ ವ್ಯಾಪ್ತಿಯ ಭೋಗನಹಳ್ಳಿ ಸಮೀಪ ಸುಮಾರು 25 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಬಂಡೆಗಳನ್ನು ಬ್ಲಾಸ್ಟ್ ಮಾಡಲು ಜಿಲೆಟಿನ್ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಭಾರೀ ಪ್ರಮಾಣದ ಜಿಲೆಟಿನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾಮಗಾರಿ ಆದರ್ಶ್ ಡೆವಲಪರ್ಸ್ ಸಂಸ್ಥೆಯಿಂದ ನಡೆಯುತ್ತಿದ್ದು, ಎಂಎನ್‌ಸಿ ಕಂಪನಿಗಳ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಜಿಲೆಟಿನ್ ಸ್ಫೋಟಕಗಳನ್ನು ಬಳಸಲು ಅಗತ್ಯವಿರುವ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜುಲೈ 11ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಆದರ್ಶ್ ಡೆವಲಪರ್ಸ್ ಸಂಸ್ಥೆ ಸೇರಿದಂತೆ ಅರುಣ್ ಕುಮಾರ್, ಜಗನ್ ಹಾಗೂ ಪ್ರಭಾಕರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು, ಜಿಲೆಟಿನ್ ಎಲ್ಲಿಂದ ತರಲಾಗಿತ್ತು? ಅದನ್ನು ಸಂಗ್ರಹಿಸಲು ಹಾಗೂ ಬಳಕೆ ಮಾಡಲು ಅನುಮತಿ ಇತ್ತೇ? ಎಂಬುದೂ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
