– ಶ್ರಾವಣ ಮಾಸ ಸಂಭ್ರಮದ ವೇಳೆ ನಡೆದೇ ಹೋಯ್ತು ದುರಂತ
ಪಾಟ್ನ: ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದು ಭಕ್ತರು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ವೇಳೆ ದುರಂತವೊಂದು ನಡೆದುಹೋಗಿದೆ. ಪೂಜಾ ಕೈಂಕರ್ಯಗಳು ಜರುಗುತ್ತಿದ್ದ ವೇಳೆ ಕಾಲ್ತುಳಿತ (Stampede) ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬಿಹಾರದ ಲಖಿಸರಾಯ್‌ನಲ್ಲಿರುವ ಅಶೋಕ ಧಾಮ ದೇವಾಲಯದಲ್ಲಿ (Ashok Dham Temple ) ನಡೆದಿದೆ.

ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಡಜನ್‌ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರ ಶ್ರಾವಣ ಮಾಸದ (Shravana Maasa) ಮೂರನೇ ಸೋಮವಾರವಾದ ಇಂದು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಹಾಗೂ ಜಲಾಭಿಷೇಕ (ಜಲ ಅರ್ಪಣೆ) ಮಾಡಲು ಹೆಚ್ಚಿನ ಸಂಖ್ಯೆ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಬೆಳ್ಳಂಬೆಳಗ್ಗೆ ದುರಂತ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 50,000 ಸಾವಿರ ಭಕ್ತರು ದೇವಸ್ಥಾನದ ಅಂಗಳದಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗಿದೆ. ಘಟನೆ ಬಳಿಕ ಗಾಯಗೊಂಡವರನ್ನ ಚಿಕಿತ್ಸೆಗಾಗಿ ಲಖಿಸರಾಯ್ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಡಳಿತ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ತಂಡಗಳು ಸ್ಥಳಕ್ಕೆ ಧಾವಿಸಿದ್ದಿ, ರಕ್ಷಣಾ ಕಾರ್ಯಾಚರಣೆ ಹಾಗೂ ವೈದ್ಯಕೀಯ ನೆರವು ನೀಡಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇವಾಲಯದ ಆವರಣದಲ್ಲಿ ಜನಸಂದಣಿ ನಿಯಂತ್ರಿಸಲು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
