ಬೆಳಗಾವಿ: ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಪಾಲಾಗಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್(Shivanand Neelannavar) ಪ್ರಕರಣದಲ್ಲಿ ಈಗ ಸ್ಯಾಂಡಲ್‌ವುಡ್ (Sandalwood) ತಾರೆಯರಿಗೆ ತಲೆನೋವು ಶುರುವಾಗಿದೆ. ಆರೋಪಿ ಶಿವಾನಂದ ತನ್ನ ಪ್ರಚಾರಕ್ಕಾಗಿ ಹೂಡಿಕೆದಾರರ ಹಣವನ್ನು ಬಳಸಿ ಸ್ಟಾರ್ ನಟ ನಟಿಯರನ್ನು ಕರೆಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದೇ ಈಗ ಚಿತ್ರರಂಗದ ಗಣ್ಯರಿಗೆ ಕಂಟಕವಾಗಿ ಪರಿಣಮಿಸಿದೆ.
ಕಂದಾಯ ಮತ್ತು ಸಹಕಾರ ಇಲಾಖೆಯಿಂದ ಆರಂಭವಾದ ಈ ವಂಚನೆ ಪ್ರಕರಣದ ತನಿಖೆ ಸದ್ಯ ಸಿಐಡಿ (CID) ಕೈಯಲ್ಲಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸಿಐಡಿ ಅಧಿಕಾರಿಗಳಿಗೆ ಶಾಕಿಂಗ್ ವಿಚಾರವೊಂದು ಲಭ್ಯವಾಗಿದೆ.
ಕಳೆದ ವರ್ಷ ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಬೆಳಗಾವಿ ಹಬ್ಬ ಎಂಬ ಅದ್ದೂರಿ ಉತ್ಸವ ಆಯೋಜಿಸಲಾಗಿತ್ತು. ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷ ಹಾಗೂ ಸಿನಿಮಾ ನಟ ಎಂದು ಹೇಳಿಕೊಳ್ಳುವ ಅಭಿಲಾಷ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು.
ಗ್ರಾಹಕರು ಮತ್ತು ಸಾರ್ವಜನಿಕರು ಶಿವಂ ಅಸೋಸಿಯೇಟ್ಸ್‌ನಲ್ಲಿ(Shivam Associates) ಡೆಪಾಸಿಟ್ ಮಾಡಿದ್ದ ಕೋಟ್ಯಂತರ ರೂಪಾಯಿ ಹಣದಲ್ಲೇ ಈ ಸಾಂಸ್ಕೃತಿಕ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಭರಿಸಲಾಗಿದೆ ಎಂಬ ಬಲವಾದ ಅನುಮಾನ ಸಿಐಡಿಗೆ ಬಂದಿದೆ.

ಅಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್ ಹಾಗೂ ಐಂದ್ರಿತಾ ರೈ, ವಶಿಷ್ಠ ಸಿಂಹ, ಗಾಯಕ ರಾಜೇಶ್ ಕೃಷ್ಣನ್ ಭಾಗಿಯಾಗಿದ್ದರು.
ಶಿವಾನಂದ ನೀಲಣ್ಣವರ್ ಈ ಸಿನಿಮಾ ತಾರೆಗೆ ಎಷ್ಟು ರೂಪಾಯಿ ಸಂಭಾವನೆ ನೀಡಿದ್ದಾರೆ? ಆ ಹಣದ ಸಂದಾಯ ಬ್ಯಾಂಕ್ ಅಕೌಂಟ್ ಮೂಲಕ ಆಗಿದೆಯೇ ಅಥವಾ ಚೆಕ್/ಕ್ಯಾಶ್ ಮೂಲಕ ನಡೆದಿದೆಯೇ ಎಂಬ ಸಂಪೂರ್ಣ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಿಐಡಿ ಕಲೆ ಹಾಕುತ್ತಿದೆ. ಅಕ್ರಮ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಈ ಎಲ್ಲ ಸಿನಿ ತಾರೆಯರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಐಡಿ ಸಜ್ಜಾಗಿದೆ.
ಅಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸಿನಿ ತಾರೆಯರಿಗೂ ಶೀಘ್ರದಲ್ಲೇ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಕೋರುತ್ತೇವೆ ಎಂದು ಕರ್ನಾಟಕ ಸಿಐಡಿಯ ಡಿಐಜಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.
ಮಾಡದ ತಪ್ಪಿಗೆ ಅಥವಾ ತಮಗರಿವಿಲ್ಲದೆ ವಂಚಕನೊಬ್ಬನ ಕಾರ್ಯಕ್ರಮಕ್ಕೆ ಬಂದು ಹೋದ ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಬ್ಯಾಂಕ್ ಖಾತೆಗಳ ವಿವರಣೆ ನೀಡಬೇಕಾದ ಅನಿವಾರ್ಯತೆ ನಟ ನಟಿಯರಿಗೆ ಎದುರಾಗಿದ್ದು, ಈ ಹೈಪ್ರೊಫೈಲ್ ತನಿಖೆ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
