ಮುಂಜಾನೆ ಅಲಾರಂ ಬಾರಿಸುತ್ತಿದ್ದಂತೆಯೇ ಅದನ್ನು ಆಫ್ ಮಾಡಲು ಕೈ ಚಾಚಿದ ತಕ್ಷಣ ಮೊಬೈಲ್ (Mobile) ಫೋನ್ ಪರದೆಯ ಮೇಲೆ WhatsApp ಸಂದೇಶಗಳು, Instagram Reels, Facebook ನೋಟಿಫಿಕೇಶನ್‌ಗಳು ಕಾಣಿಸಿಕೊಳ್ಳುತ್ತವೆ. ಒಂದೆರೆಡು ನಿಮಿಷ ಮಾತ್ರ ನೋಡುತ್ತೇನೆ ಎಂದು ಶುರುವಾದ ಸ್ಕ್ರೋಲಿಂಗ್, ಗೊತ್ತಾಗುವಷ್ಟರಲ್ಲಿ ಒಂದು ಗಂಟೆ ದಾಟಿರುತ್ತದೆ. ಅಷ್ಟರಲ್ಲಿ ಬೆಳಗಿನ ಕೆಲಸಗಳು ತಡವಾಗಿರುತ್ತವೆ, ಮನಸ್ಸು ಏನೋ ಆಯಾಸಗೊಂಡಂತೆ ಅನಿಸುತ್ತದೆ.
ಇದು ಒಬ್ಬರ ಕಥೆಯಲ್ಲ, ಇಂದು ಲಕ್ಷಾಂತರ ಜನರ ದಿನ ಇದೇ ರೀತಿ ಆರಂಭವಾಗುತ್ತಿದೆ. ಇಂದು ಎಲ್ಲದಕ್ಕೂ ಮೊಬೈಲ್‌ಗೆ ಅವಲಂಬಿತರಾಗಿದ್ದೇವೆ. ಆದರೆ ಇದೇ ಅಭ್ಯಾಸ ನಿಧಾನವಾಗಿ ನಮ್ಮ ಸಮಯ, ಏಕಾಗ್ರತೆ ಮತ್ತು ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತಿದೆ. ಇದು ಆರೋಗ್ಯಕ್ಕೆ ಭಾರೀ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಇಂದು ಯುವಜನರು ದಿನಕ್ಕೆ ಸರಾಸರಿ 9 ಗಂಟೆಗಳವರೆಗೆ ಕಂಪ್ಯೂಟರ್ ಹಾಗೂ ಮೊಬೈಲ್‌ಗಳ ಸ್ಕ್ರೀನ್ ನೋಡುತ್ತಾ ಕಾಲ ಕಳೆಯುತ್ತಾರೆ. ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮಾನಸಿಕ ಆರೋಗ್ಯ, ನಿದ್ರೆ ಹಾಗೂ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹಲವು ಅದ್ಯಯನಗಳು ತಿಳಿಸಿವೆ. ಇದೆಲ್ಲ ಸಮಸ್ಯೆಗೆ ಡಿಜಿಟಲ್ ಡಿಟಾಕ್ಸ್ ಪರಿಹಾರವಾಗಿದೆ. ಡಿಜಿಟಲ್ ಟಿಟಾಕ್ಸ್ ಎಂದರೇನು? ಹೇಗೆ ಅಳವಡಿಸಿಕೊಳ್ಳುವುದು? ಇದರ ಪ್ರಯೋಜನಗಳೇನು ಎಂಬ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಡಿಜಿಟಲ್ ಡಿಟಾಕ್ಸ್ ಎಂದರೇನು?
‘ಡಿಟಾಕ್ಸ್’ ಎಂದರೆ ಯಾವುದೇ ವ್ಯಸನಕಾರಿ ಅಭ್ಯಾಸ ಅಥವಾ ವಸ್ತುವಿನ ಮೇಲಿನ ಅವಲಂಬನೆಯನ್ನು ನಿಯಮಿತವಾಗಿ ಕಡಿಮೆ ಮಾಡುವುದು. ಅದೇ ರೀತಿ, ಡಿಜಿಟಲ್ ಡಿಟಾಕ್ಸ್ (Digital Detox) ಎಂದರೆ ಮೊಬೈಲ್ ಫೋನ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ನಿಯಂತ್ರಿಸುವುದು. ಇದರ ಉದ್ದೇಶ ತಂತ್ರಜ್ಞಾನವನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ. ಅಗತ್ಯಕ್ಕೆ ತಕ್ಕಂತೆ ಬಳಸುವ ಅಭ್ಯಾಸ ಬೆಳೆಸಿಕೊಳ್ಳುವುದಾಗಿದೆ.

ಅತಿಯಾದ ಸ್ಕ್ರೀನ್ ಬಳಕೆಯಿಂದ ಏನಾಗುತ್ತೆ?
ನಿರಂತರವಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದರಿಂದ ಮಾಹಿತಿ ಅತಿಭಾರ (Information Overload) ಉಂಟಾಗಬಹುದು. ಇದು ಆತಂಕ, ಒತ್ತಡ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗಬಹುದು. ಜೊತೆಗೆ, ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸುವ ಸಾಮರ್ಥ್ಯಕ್ಕೂ ಅಡ್ಡಿಯಾಗಬಹುದು.
ಸಾಮಾಜಿಕ ಜಾಲತಾಣಗಳ ಪ್ರಭಾವ
ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಮ್ಮ ಜೀವನದೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅಭ್ಯಾಸ ಅನೇಕ ಜನರಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಡಿಜಿಟಲ್ ಡಿಟಾಕ್ಸ್ ಅನುಸರಿಸುವುದರಿಂದ ಏನೆಲ್ಲ ಪ್ರಯೋಜನ
- ಆತಂಕ ಮತ್ತು ಒತ್ತಡ ಕಡಿಮೆಯಾಗಬಹುದು.
- ನಿದ್ರೆಯ ಗುಣಮಟ್ಟ ಸುಧಾರಿಸಬಹುದು.
- ಏಕಾಗ್ರತೆ
- ಆತ್ಮವಿಶ್ವಾಸ ಹೆಚ್ಚಾಗುತ್ತದೆ
- ಕುಟುಂಬ ಮತ್ತು ಸ್ನೇಹಿತರೊಂದಿಗೆ ನೇರ ಸಂವಹನಕ್ಕೆ ಹೆಚ್ಚಿನ ಸಮಯ ದೊರೆಯುತ್ತದೆ.
ಡಿಜಿಟಲ್ ಡಿಟಾಕ್ಸ್ ಮಾರ್ಗಗಳು
ದಿನದಲ್ಲಿ ಎಷ್ಟು ಬಾರಿ ಅನಗತ್ಯವಾಗಿ ಫೋನ್ ಅನ್‌ಲಾಕ್ ಮಾಡುತ್ತೀರಿ ಎಂಬುದನ್ನು ಗಮನಿಸಿ.
ಸಾಮಾಜಿಕ ಜಾಲತಾಣಗಳು ಮತ್ತು ಇತರ ಆ್ಯಪ್‌ಗಳಿಗೆ ಸಮಯ ಮಿತಿ ನಿಗದಿಪಡಿಸಿ.
ಸಾಧ್ಯವಾದರೆ ಸಂದೇಶ ಕಳುಹಿಸುವ ಬದಲು ನೇರವಾಗಿ ಮಾತನಾಡಿ.
ಅಗತ್ಯವಿದ್ದರೆ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಳ್ಳಿ.
ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಫೋನ್ ಬಳಕೆಯನ್ನು ನಿಲ್ಲಿಸಿ.
ಖಾಲಿ ಸಮಯದಲ್ಲಿ ವ್ಯಾಯಾಮ, ಪುಸ್ತಕ ಓದುವುದು, ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಅಥವಾ ಇತರ ಹವ್ಯಾಸಗಳನ್ನು ಅನುಸರಿಸುವುದು ಉತ್ತಮ.
ಸಂತೋಷಕ್ಕೆ ಇದೇ ಮಾರ್ಗ
2025ರಲ್ಲಿ ನಡೆದ ವಿವಿಧ ಅಧ್ಯಯನಗಳು ತಿಳಿಸುವ ಪ್ರಕಾರ, ಡಿಜಿಟಲ್ ಡಿಟಾಕ್ಸ್ ಕೈಗೊಳ್ಳುವವರು ಮೊದಲಿಗಿಂತ ಹೆಚ್ಚು ಸಂತೋಷವಾಗಿದ್ದಾರೆ ಎನ್ನಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಒಂದು ವಾರದ ಅವಧಿಗೆ ಸಾಮಾಜಿಕ ಮಾಧ್ಯಮದಿಂದ ದೂರವಿರುವ ವ್ಯಕ್ತಿಗಳು ಆತಂಕ ಕಡಿಮೆಯಾಗಿದೆ. ಆತ್ಮವಿಶ್ವಾಸ ಹೆಚ್ಚಿದೆ.

ಕೇವಲ ಎರಡು ವಾರಗಳಲ್ಲಿ ಅವರ ಮಾನಸಿಕ ಸ್ಥಿತಿಯು ಒತ್ತಡ ಹಾಗೂ ಆತಂಕಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳಿಗಿಂತ ಹೆಚ್ಚಿನ ಸುಧಾರಣೆ ಕಾಣಿಸಿಕೊಂಡಿದೆ. ಈ ಬದಲಾವಣೆಗೆ ಡಿಜಿಟಲ್ ಡಿಟಾಕ್ಸ್ ಕಾರಣ ಎಂದು ವರದಿಯಾಗಿದೆ.
ಡಿಜಿಟಲ್ ಡಿಟಾಕ್ಸ್ ಯಾರಿಗೆಲ್ಲ ಬೇಕು?
ಈ ‘ಡಿಜಿಟಲ್ ಡಿಟಾಕ್ಸ್’ ಮಹಿಳೆಯರಿಗೆ ಮತ್ತು ಅವಿಭಕ್ತ ಕುಟುಂಬ ಪರಿಸರದಲ್ಲಿ ವಾಸಿಸುವವರಿಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಅಲ್ಲದೇ ಅತಿಯಾದ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳಿರುವವರಿಗೆ ಇದು ಅಗತ್ಯವಾಗಿ ಬೇಕು. ಮಕ್ಕಳಿಗೂ ಈ ಅಭ್ಯಾಸವನ್ನು ಕಲಿಸಬೇಕು. ದಿನಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ಮೊಬೈಲ್, ಲ್ಯಾಪ್‌ಟಾಪ್‌ಗಳಿಂದ ಜನ ದೂರ ಉಳಿಯಬೇಕು.
