ರಿಯಾಧ್: ಪೋರ್ಚುಗಲ್‌ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ತಮ್ಮ ನಿವೃತ್ತಿ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. 2026-27ರ ಫುಟ್ಬಾಲ್ ಋತುವಿನ ಅಂತ್ಯಕ್ಕೆ ವೃತ್ತಿಪರ ಫುಟ್ಬಾಲ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದು 41 ವರ್ಷದ ರೊನಾಲ್ಡೊ ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಕ್ಲಬ್ ಅಲ್-ನಸ್ರ್ (Saudi Arabian club Al-Nassr) ಪರ ಇನ್ನೂ ಆಡುತ್ತಿರುವ ರೊನಾಲ್ಡೊ, ಈ ಹಿಂದೆ ನಿವೃತ್ತಿ ಸನ್ನಿಹಿತವಾಗಿದೆ ಎಂದು ಹೇಳಿದ್ದರೂ, ನಿಖರವಾದ ದಿನಾಂಕ ಘೋಷಿಸಿರಲಿಲ್ಲ. ಆದರೆ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿರುವ ಅವರು, ನಿವೃತ್ತಿಯ ಕುರಿತು ಇದೇ ಮೊದಲ ಬಾರಿಗೆ ಅತ್ಯಂತ ಸ್ಪಷ್ಟ ಸುಳಿವು ನೀಡಿದ್ದಾರೆ.

‘ಬಹುಶಃ ಇದೇ ನನ್ನ ಕೊನೆಯ ವರ್ಷ’
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಪತ್ನಿ ಜಾರ್ಜಿನಾ ರೊಡ್ರಿಗ್ಸ್ ಅವರೊಂದಿಗೆ ವೈವಾಹಿಕ ಜೀವನದ ಕುರಿತು ಮಾತನಾಡುತ್ತಿದ್ದ ವೇಳೆ ರೊನಾಲ್ಡೊ ತಮ್ಮ ಫುಟ್ಬಾಲ್ (Football) ಭವಿಷ್ಯದ ಬಗ್ಗೆಯೂ ಪ್ರತಿಕ್ರಿಯಿಸಿದ್ರು, ʻಬಹುಶಃ ಇದೇ ನನ್ನ ಫುಟ್ಬಾಲ್‌ನ ಕೊನೆಯ ವರ್ಷ. ನಾನು ಅದ್ಭುತವಾದ ಪರಂಪರೆಯನ್ನು ಬಿಟ್ಟು ಹೋಗಲು ಬಯಸುತ್ತೇನೆʼ ಎಂದು ರೊನಾಲ್ಡೊ ಹೇಳಿದ್ದಾರೆ.
ರೊನಾಲ್ಡೊ ಕಳೆದ ನವೆಂಬರ್‌ನಲ್ಲಿ ಇನ್ನೂ ಒಂದು ಅಥವಾ ಎರಡು ವರ್ಷಗಳ ಕಾಲ ಫುಟ್ಬಾಲ್ ಆಡುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ಅಲ್ಲದೇ, 2026ರ ವಿಶ್ವಕಪ್ ತಮ್ಮ ಅಂತಿಮ ವಿಶ್ವಕಪ್ ಆಗಿರಲಿದೆ ಎಂಬುದನ್ನೂ ಅವರು ಖಚಿತಪಡಿಸಿದ್ದರು.
2026ರ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡ ಸ್ಪೇನ್ ವಿರುದ್ಧ ಸೋತು ಹೊರಬಿದ್ದ ಬಳಿಕವೂ ರೊನಾಲ್ಡೊ ತಮ್ಮ ವೃತ್ತಿಜೀವನಕ್ಕೆ ಯಾವಾಗ ತೆರೆ ಎಳೆಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಫಿಫಾ ಬಳಿಕ ನಿವೃತ್ತಿ ಹೇಳಲಿದ್ದಾರೆ ಎಂಬ ಸುಳಿವು ನೀಡಿದಾಗ ಅದನ್ನು ರೊನಾಲ್ಡೊ ಅವ್ರೇ ಅಲ್ಲಗಳೆದಿದ್ದರು. ಇದೀಗ ಅವರ ಹೊಸ ಹೇಳಿಕೆ ನಿವೃತ್ತಿಯ ಸಮಯ ಹತ್ತಿರವಾಗಿರುವ ಸೂಚನೆ ನೀಡಿದೆ.

25 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಅಂತ್ಯ?
ರೊನಾಲ್ಡೊ ಅವರ ಇತ್ತೀಚಿನ ಹೇಳಿಕೆಗಳು ಅವರ 25 ವರ್ಷಗಳ ಸುದೀರ್ಘ ವೃತ್ತಿಪರ ಫುಟ್ಬಾಲ್ ವೃತ್ತಿಜೀವನ ಅಂತ್ಯದ ಹಂತ ತಲುಪಿರುವ ಸಾಧ್ಯತೆಯನ್ನು ಮತ್ತಷ್ಟು ಬಲಪಡಿಸಿವೆ.
ಸ್ಪೋರ್ಟಿಂಗ್ ಸಿಪಿ ಮೂಲಕ ಹಿರಿಯರ ತಂಡದ ವೃತ್ತಿಜೀವನ ಆರಂಭಿಸಿದ ರೊನಾಲ್ಡೊ, ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಹಾಗೂ ಜುವೆಂಟಸ್‌ನಂತಹ ವಿಶ್ವದ ಪ್ರಮುಖ ಕ್ಲಬ್‌ಗಳ ಪರ ಆಡಿದರು. 2023ರ ಜನವರಿಯಿಂದ ಅವರು ಸೌದಿ ಅರೇಬಿಯಾದ ಅಲ್-ನಸ್ರ್ ತಂಡದ ಪರ ಆಡುತ್ತಿದ್ದಾರೆ. ರೊನಾಲ್ಡೊ ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಅವಧಿ ರಿಯಲ್ ಮ್ಯಾಡ್ರಿಡ್‌ನಲ್ಲಿತ್ತು. ಕ್ಲಬ್ ಪರ 438 ಪಂದ್ಯಗಳಲ್ಲಿ 450 ಗೋಲುಗಳನ್ನು ಗಳಿಸಿರುವ ಅವರು, ರಿಯಲ್ ಮ್ಯಾಡ್ರಿಡ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದಾರೆ.
2026ರ ವಿಶ್ವಕಪ್‌ನಲ್ಲಿಯೂ ರೊನಾಲ್ಡೊ 3 ಗೋಲುಗಳನ್ನು ದಾಖಲಿಸಿ ಪೋರ್ಚುಗಲ್ ತಂಡವನ್ನು ರೌಂಡ್ ಆಫ್ 16 ಹಂತದವರೆಗೆ ಮುನ್ನಡೆಸಿದ್ದರು.

