-ರಾಜಕೀಯ ರಂಗದಲ್ಲಿ ಆಧುನಿಕತೆ, ಹೋರಾಟಕ್ಕೆ ಇನ್ನೊಂದು ಹೆಸರೇ ಡಿಕೆಶಿ
-ಅಧಿಕಾರ ವಹಿಸಿದ 100 ದಿನಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳು
-ಸರ್ಕಾರವನ್ನು ಟೀಕಿಸುತ್ತಿರುವ ವಿಪಕ್ಷಕ್ಕೆ ಈ ಕಾರ್ಯಕ್ರಮವೇ ಉತ್ತರ
ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DK Shivakumar) ಅವರ ನೇತೃತ್ವದ ನಮ್ಮ ಸರ್ಕಾರ ಹೊಸ ಆಲೋಚನೆಗಳು, ಜನಪರವಾದ ಕಾರ್ಯಕ್ರಮಗಳನ್ನು ಕೇವಲ ನೂರು ದಿನಗಳಲ್ಲಿ ರಾಜ್ಯದ ಜನರಿಗೆ ಕೊಡುವ ಕೆಲಸ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ .ಜಿ.ಪರಮೇಶ್ವರ್ (G Parameshwar) ಅವರು ಹೇಳಿದರು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ರಾಜಕೀಯ ರಂಗದಲ್ಲಿ ಬಹುಶಃ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರು ಇದ್ದರೆ ಅದು ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಅವರು ಅಧಿಕಾರ ವಹಿಸಿಕೊಂಡ ನಂತರ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಕೇವಲ 100 ದಿನಗಳಲ್ಲಿ ರಾಜ್ಯದ ಜನರಿಗೆ ಕೊಡುವ ಕೆಲಸ ಮಾಡಿದ್ದಾರೆ. ಇಂದು ಕರ್ನಾಟಕ ಆಡಳಿತ ವ್ಯವಸ್ಥೆಯಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಈ ನೂರು ದಿನಗಳ ಪೂರೈಸಿರುವ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಕಾರ್ಯಕ್ರಮಗಳು ಮತ್ತು ನಮ್ಮ ಮುಂದಿನ ದಾರಿ ಏನು ಎನ್ನುವುದನ್ನು ತಿಳಿಸಲು ಇಂದಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: 100 ದಿನಗಳ ಸಂಭ್ರಮ| ಬಲಿಷ್ಠ ಕರ್ನಾಟಕಕ್ಕೆ 3 ಮಹಾ ಸಂಕಲ್ಪ, 9 ಸಂಕಲ್ಪ ಕೈಗೊಂಡ ಡಿಕೆಶಿ
ಮುಂದುವರೆದು, ಬಹಳ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮವನ್ನು ಮಾಡಿ, ರಾಜ್ಯದ ಜನತೆಗೆ ನಾವು ಕೊಟ್ಟ ಮಾತಿನಂತೆ ಹೇಗೆ ನಡೆಯುತ್ತಿದ್ದೇವೆ ಎಂಬುದನ್ನು ತೋರಿಸಿಕೊಡಬೇಕು ಎನ್ನುವ ಆಲೋಚನೆ ಮುಖ್ಯಮಂತ್ರಿಗಳಿಗೆ ಇತ್ತು. ಆದರೆ ಭೀಕರ ಬರಗಾಲ ಇರುವುದರಿಂದ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ಸೂಕ್ತವಲ್ಲ ಎಂದು ಹೀಗೆ ಸರಳವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
2023ರ ಮೇ 20ರಂದು ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಗೆ ಬಂತು. ಹಿಂದಿನ ಭ್ರಷ್ಟ ಬಿಜೆಪಿ (BJP) ಸರ್ಕಾರ ಜನಮನ್ನಣೆಯನ್ನು ಕಳೆದುಕೊಂಡಿತ್ತು. ಆ ದಿನ ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕಾರ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪನೆ ಮಾಡಿದರು. ವಿರೋಧ ಪಕ್ಷಗಳ ಟೀಕೆ – ಟಿಪ್ಪಣಿಗಳ ಹೊರತಾಗಿ ಸಹ ಮೂರು ವರ್ಷಗಳ ಹಾದಿಯಲ್ಲಿ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ಕೊಟ್ಟರು ಎಂದ ಡಿಸಿಎಂ ಈ ಸಂದರ್ಭದಲ್ಲಿ ವಿಶೇಷವಾಗಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.ಇದನ್ನೂ ಓದಿ: ಕರ್ನಾಟಕದ ‘ಗ್ಯಾರಂಟಿ’ ಮಾದರಿ ದೇಶದ ಎಲ್ಲೆಲ್ಲೂ ಇದೆ: ಸಿಎಂ ಡಿಕೆಶಿ ಬಣ್ಣನೆ

ಬರವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ:
ಕಳೆದ 150 ವರ್ಷಗಳ ಇತಿಹಾಸದಲ್ಲಿ ಇಂತಹ ಭೀಕರ ಬರಗಾಲ ಬಂದಿರಲಿಲ್ಲ. ಇಡೀ ರಾಜ್ಯ ಇಂದು ಬರದಿಂದಾಗಿ ತತ್ತರಿಸುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ, ಜಾನುವಾರುಗಳ ಮೇವಿಗೆ ಸಮಸ್ಯೆ, ಜನರು ಕೆಲಸವಿಲ್ಲದೆ ಗುಳೆ ಹೋಗುವುದನ್ನು ನಾವು ಅನೇಕ ಜಿಲ್ಲೆಗಳಲ್ಲಿ ಕಾಣುತ್ತಿದ್ದೇವೆ. ಇದನ್ನು ನಮ್ಮ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಅದನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಹೇಳಿದರು.
2023-24ರಲ್ಲಿ ಇದೇ ಮಾದರಿಯ ಬರಗಾಲ ಬಂದಿತ್ತು, ಆಗ ರಾಜ್ಯದಲ್ಲಿ 39,000 ಕೋಟಿ ರೂ.ಗೂ ಮೀರಿದ ನಷ್ಟ ಸಂಭವಿಸಿತ್ತು. ನಾವು 18,000 ಕೋಟಿ ರೂ. ನಷ್ಟವನ್ನು ಕೇಂದ್ರಕ್ಕೆ ತುಂಬಿಕೊಡಲು ಕೇಳಿದ್ದೆವು. ಆದರೆ ಅವರಿಂದ ಯಾವ ಸ್ಪಂದನೆ ಬರಲಿಲ್ಲ. ಕೊನೆಗೆ ಅಂದಿನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು, ಶಾಸಕರು ಎಲ್ಲರೂ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದರು. ಆದರೂ ಯಾವ ಸ್ಪಂದನೆ ದೊರೆಯಲಿಲ್ಲ. ಆ ನಂತರ ಯಾವುದೇ ವಿಧಿಯಿಲ್ಲದೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವಂತಾಯಿತು. ಬಳಿಕ ಸುಪ್ರೀಂ ಕೋರ್ಟ್‌ನ ಸೂಚನೆ ಮೇರೆಗೆ ಕೇಂದ್ರ ಸರ್ಕಾರ 3,454 ಕೋಟಿ ರೂ.ಯನ್ನು ಬಿಡುಗಡೆ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಆಶಯಗಳಿಗೆ ತಕ್ಕದಾಗಿ ಇರಬೇಕಿದೆ, ಆದರೆ ಕೇಂದ್ರ ಸರ್ಕಾರಕ್ಕೆ ಇದು ನಗಣ್ಯವಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಪ್ರ‍್ಯಾಕ್ಟಿಸ್‌ಗಾಗಿ ಶ್ವಾನದ ಕಾಲು ಕಟ್ – ಪರಿಶೀಲನೆ ವೇಳೆ ಖಾಸಗಿ ಪಶು ಆಸ್ಪತ್ರೆಯ ಕರ್ಮಕಾಂಡ ಬಯಲು

ಇನ್ನೂ 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ:
ಈಗಾಗಲೇ ನಾವು ಕೇಂದ್ರದ ಮಾರ್ಗಸೂಚಿಗಳ ಅನ್ವಯ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಯುತ್ತಿದ್ದು, ಅವನ್ನು ಕೂಡ ಬರಪೀಡಿತ ಎಂದು ಘೋಷಣೆ ಮಾಡುವ ಹಂತದಲ್ಲಿದೆ. ನಾವು ಇದನ್ನು ಹಂತಹಂತವಾಗಿ ಘೋಷಣೆ ಮಾಡಿ, ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ (Central Govt) ಬರಪರಿಹಾರಕ್ಕಾಗಿ ಮನವಿಯನ್ನು ಕೊಡಲಿದ್ದೇವೆ ಎಂದು ತಿಳಿಸಿದರು.
ಇಷ್ಟೆಲ್ಲ ಸಂಕಷ್ಟಗಳ ನಡುವೆ ಸಹ ಇಡೀ ದೇಶದಲ್ಲೇ ಯಾವುದಾದರೊಂದು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಆರೋಗ್ಯಕರವಾಗಿ ಇಟ್ಟಿರುವ ಹಣಕಾಸು ಸಚಿವರು ಯಾರಾದರೂ ಇದ್ದರೆ ಅದು 16 ಬಜೆಟ್‌ಗಳನ್ನು ನೀಡಿದ ನಮ್ಮ ನಾಯಕ ಸಿದ್ದರಾಮಯ್ಯನವರು ಎಂಬುದನ್ನು ಅತ್ಯಂತ ಹೆಮ್ಮೆಯಿಂದ ಹೇಳಬಯಸುತ್ತೇನೆ. ಸಿದ್ದರಾಮಯ್ಯನವರು ನಮ್ಮ ಪಕ್ಷದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಕೊಟ್ಟರು, ಅವುಗಳು ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 1,50,126 ಕೋಟಿ ರೂ.ಯನ್ನು ಗ್ಯಾರಂಟಿಗಳಿಗಾಗಿ ಖರ್ಚು ಮಾಡಲಾಗಿದೆ. ಈ ಗ್ಯಾರಂಟಿಯನ್ನು ನಾವು ಮಾತ್ರ ಒಪ್ಪಿಕೊಂಡಿದ್ದಲ್ಲ, ಪಾಶ್ಚಿಮಾತ್ಯ ದೇಶದ ವಿಶ್ವವಿದ್ಯಾಲಯಗಳಿಂದ ಈ ಗ್ಯಾರಂಟಿಗಳನ್ನು ಮೆಚ್ಚಿ, ಅದನ್ನು ಅಧ್ಯಯನ ಮಾಡಲಿಕ್ಕಾಗಿ ಬಂದಿದ್ದಾರೆ. ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರು ನಮ್ಮ ಶಕ್ತಿ ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು, 50% ರಿಯಾಯಿತಿ ದರದಲ್ಲಿ ಅಲ್ಲಿ ಜಾರಿ ಮಾಡಿದ್ದಾರೆ. ಹೀಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ನಮ್ಮ ಪ್ರಣಾಳಿಕೆಯಲ್ಲಿ 590 ಭರವಸೆಯನ್ನು ನೀಡಿದ್ದೆವು. ಈಗಾಗಲೇ ನಾವು 245ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು 11ಜಿ (11G) ಮಾದರಿಯನ್ನು ತಿಳಿಸಿದ್ದಾರೆ. ಗ್ಯಾರಂಟಿ ಎಕಾನಮಿ, ಗ್ರಾಸ್ ರೂಟ್ ಎಕಾನಮಿ, ಗಿಗ್ ಎಕಾನಮಿ, ಗುಡ್ ಗವರ್ನೆನ್ಸ್, ಜಿಯೋಗ್ರಾಫಿಕಲ್ ಈಕ್ವಾಲಿಟಿ, ಗ್ರೀನ್ ಎಕಾನಮಿ, ಗ್ರೋಯಿಂಗ್ ಅರ್ಬನ್ ಎಕಾನಮಿ, ಗ್ಲೋಬ್ ಟ್ರಾಟಿಂಗ್ ಎಕಾನಮಿ, ಗುಡ್ ಪಬ್ಲಿಕ್ ಎಜುಕೇಷನ್, ಗುಡ್ ಹೆಲ್ತ್ ಟು ಆಲ್ ಎಂಬ 11Gಗಳನ್ನು ಉದಾಹರಣೆಯಾಗಿಟ್ಟುಕೊಂಡು ಇಂದಿನ ಮುಖ್ಯಮಂತ್ರಿಗಳು ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಲಾರಿ – ಕ್ಲೀನರ್ ಸ್ಥಳದಲ್ಲೇ ಸಾವು, ಚಾಲಕನಿಗೆ ಗಂಭೀರ ಗಾಯ
ಇದು ಜೆನ್‌ಜಿ (GenZ) ಯುಗ. ದೇಶದಲ್ಲಿ ಈ ಜೆನ್‌ಜಿ (GenZ) ಗಳು 40 ಕೋಟಿ ಜನರಿದ್ದಾರೆ. ಇವರಿಗೆ ಜಾತಿ, ಧರ್ಮಗಳ ಬೇಧವಿಲ್ಲ. ಅವರ ಉದ್ದೇಶ ಒಂದೇ “ನಾನು ನನ್ನ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು?” ಎನ್ನುವುದಾಗಿದೆ. ಇವರು ಭವಿಷ್ಯದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 72,000 ಸರ್ಕಾರಿ ಹುದ್ದೆಗಳನ್ನು ತುಂಬುವ ಕಾರ್ಯ ಆರಂಭಿಸಿದ್ದರು. ಒಳಮೀಸಲಾತಿ ವಿಷಯ ನ್ಯಾಯಾಲಯದಲ್ಲಿದ್ದ ಕಾರಣಕ್ಕೆ ಉದ್ಯೋಗ ಭರ್ತಿ ಸ್ವಲ್ಪ ನಿಧಾನವಾಯಿತು. ಈ ಪ್ರಕ್ರಿಯೆ ಈಗ ಆರಂಭಗೊಂಡಿದೆ. ಯುವ ಉದ್ಯೋಗ ಸೇತು ಕಾರ್ಯಕ್ರಮ ಈಗ ಚಾಲನೆಯಲ್ಲಿದೆ ಎಂದು ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಿದರು.

ಸಿದ್ದರಾಮಯ್ಯನವರು ಹಾಕಿಕೊಟ್ಟ ಪಥದಲ್ಲಿ ನಮ್ಮ ಸರ್ಕಾರದ ಹೆಜ್ಜೆ:
ಸಿದ್ದರಾಮಯ್ಯನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಡಿ. ಕೆ. ಶಿವಕುಮಾರ್ ಅವರು ತಮ್ಮದೇ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಹೊಸ ಚಿಂತನೆ ಆರಂಭವಾಗಿದೆ. ಹೊಸ ಕಾರ್ಯಕ್ರಮಗಳು ಆರಂಭವಾಗಿದೆ ಎಂದರು.
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಜಾರಿ:
ರಾಜ್ಯದಲ್ಲಿ ರೈತ ಪ್ರಮುಖ. ರೈತನೇ ಮೊದಲ ಸ್ಥಾನದಲ್ಲಿ ನಿಲ್ಲುವವನು. ಅದಕ್ಕಾಗಿ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಯುವಕರು ನಗರ ಸೇರಿದ್ದಾರೆ, ವಯಸ್ಸಾದವರಷ್ಟೇ ಉಳಿದಿದ್ದಾರೆ. ಹೀಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ಉಳುಮೆಯಿಲ್ಲದೆ ಹಾಗೆ ಉಳಿದಿದೆ. ಅದಕ್ಕಾಗಿ ಸರ್ಕಾರವೇ ಅವರ ಜಮೀನನ್ನು ಉಳುಮೆ ಮಾಡಿಕೊಡಲು ನಿರ್ಧರಿಸಿದೆ ಎಂದರು.ಇದನ್ನೂ ಓದಿ: ಮಕ್ಕಳ ಅಪಹರಣ ಪ್ರಕರಣಗಳ ತನಿಖೆಗೆ ಏಕರೂಪ ವ್ಯವಸ್ಥೆ – ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್
ಪ್ರಜಾಸೇವೆ ಕಾರ್ಯಕ್ರಮ ಆರಂಭ:
ಪ್ರಜೆಗಳ ಸೇವೆಯೇ ಸರ್ಕಾರದ ಮೊದಲ ಕರ್ತವ್ಯ. ಜನರು ನಮ್ಮನ್ನು ಆರಿಸಿರುವುದೇ ಅವರ ಸೇವೆಯನ್ನು ಮಾಡುವುದಕ್ಕಾಗಿ. ಹಾಗಾಗಿ ಸರ್ಕಾರವೇ ಜನರ ಬಳಿಗೆ ಹೋಗಿ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಪ್ರಜಾಸೇವೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಜನರು ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆಯಬಾರದು, ಜನರ ಕುಂದುಕೊರತೆಗಳನ್ನು ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಿ ಆಲಿಸಿ ಪರಿಹರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ತಿಂಗಳಿಗೆ ಎರಡು ಬಾರಿ ಸಚಿವರು ಹಾಗೂ ಶಾಸಕರು ಪ್ರಜಾಸೇವಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.
ಎಐ ವಿಶ್ವವಿದ್ಯಾಲಯ ಆರಂಭ:
ಇದು ಕೃತಕಬುದ್ಧಿಮತ್ತೆ ಯುಗ. ಈ ಎಐ ಯುಗದಲ್ಲಿ ನಾವು ಹಿಂದೆ ಬೀಳಬಾರದು. ನಮ್ಮ ಯುವಕರು ಹಿಂದೆ ಬೀಳಬಾರದು. ಹಾಗಾಗಿ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸುವ ಸಲುವಾಗಿ ಎಐ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುತ್ತಿದೆ. ಐಐಐಟಿ ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಮಾಡುವುದಕ್ಕೆ, ನಂತರ ಎಐ ವಿವಿ ಸ್ಥಾಪಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದರು.ಇದನ್ನೂ ಓದಿ: ಬ್ರಿಕ್ಸ್‌ಗೆ ಅಬೇಧ್ಯ ಕೋಟೆಯಾದ ದೆಹಲಿ – 7,000 ಭದ್ರತಾ ಸಿಬ್ಬಂದಿ, 4,800 ಸಂಚಾರ ಪೊಲೀಸರ ನಿಯೋಜನೆ!

ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆ:
ರೈತನಿಗೆ ಭೂಮಿ ಬಹಳ ಮುಖ್ಯ. ಹಿಂದಿನ ಸಚಿವರು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ಡಿಜಿಟಲೀಕರಣಗೊಳಿಸುವ ಮೂಲಕ ಕಂದಾಯ ಇಲಾಖೆಗೆ ಹೊಸ ರೂಪ ಕೊಟ್ಟಿದ್ದಾರೆ. ನಾನು ಕೂಡ ಅವೆಲ್ಲವನ್ನೂ ಮುಂದುವರಿಸುವುದರ ಜೊತೆಗೆ ಒಂದು ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸುವುದಕ್ಕೆ ಯೋಜನೆ ರೂಪಿಸುತ್ತಿದ್ದೇನೆ. ಸದ್ಯದಲ್ಲೇ ಮುಖ್ಯಮಂತ್ರಿಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಯಾರಿಗೆ 30×40 ಜಾಗದ ಮನೆ ನಿರ್ಮಿಸಿಕೊಳ್ಳಲು ಜಾಗವಿಲ್ಲ ಅಂತವರಿಗೆ ನಿವೇಶನಗಳನ್ನು ಮಂಜೂರು ಮಾಡುವ ಕಾರ್ಯಕ್ರಮವಿದು. ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಮುಂದಿನ ಎರಡು ತಿಂಗಳಲ್ಲಿ ಕೊಡುವ ಗುರಿಯಿದೆ ಎಂದು ಹೇಳಿದರು.
ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-2031ರ ಹೊಸ ನೀತಿಗೆ ಅನುಮೋದನೆ:
ಏರೋಸ್ಪೇಸ್ ಟೆಕ್ನಾಲಜಿಯಲ್ಲಿ ಬೆಂಗಳೂರು ಇಡೀ ದೇಶದಲ್ಲಿ ಮುಂದೆ ಇದೆ. ಈಗಾಗಲೇ ನಮಗೆ HALನಲ್ಲಿ 40 ಏರ್‌ಕ್ರಾಫ್ಟ್‌ಗಳು ಉತ್ಪಾದನೆ ಮಾಡುವುದಾಗಿ ಟಾಟಾ ಕಂಪನಿಯವರು ಪ್ರಸ್ತಾವನೆ ಇಟ್ಟಿದ್ದಾರೆ. 72 ಲೈಟ್ ಕಂಬಾಟ್ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದನೆ ಮಾಡಲು ಎಚ್‌ಎಎಲ್‌ನವರು ಮುಂದೆ ಬಂದಿದ್ದಾರೆ. ಇದೆಲ್ಲವೂ ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ತೆರೆದಿಡಲಿದೆ ಎಂಬ ಕಾರಣಕ್ಕೆ “ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-2031”ರ ಹೊಸ ನೀತಿಗೆ ಅನುಮೋದನೆ ನೀಡಲಾಗಿದೆ ಎಂದರು.ಇದನ್ನೂ ಓದಿ: ಇಂದು ಬಿಜೆಪಿ ಪಾದಯಾತ್ರೆ ಕ್ಲೈಮ್ಯಾಕ್ಸ್ – ಬೃಹತ್ ಸಮಾರೋಪ ಸಮಾವೇಶ, 50 ಸಾವಿರಕ್ಕೂ ಅಧಿಕ ಜನ ಭಾಗಿ ಸಾಧ್ಯತೆ
ಶ್ರಮಿಕ ನಿವಾಸ ಯೋಜನೆಯಡಿ ದೂರದ ಊರುಗಳಿಂದ ಬಂದು ದೊಡ್ಡ ಕೈಗಾರಿಕೆ/ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಕಂಪನಿಗಳ ಸಹಯೋಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ತೇಗ ಸಿರಿ ಯೋಜನೆ:
ಪ್ರಸ್ತುತ ತೇಗ ಮರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ರೈತರು ತಮ್ಮ ತೋಟದ ಬೇಲಿಗಳಲ್ಲಿ ತೇಗದ ಗಿಡಗಳನ್ನು ನೆಟ್ಟು 15 ವರ್ಷ ನೋಡಿಕೊಂಡು ಬೆಳೆಸಿದರೆ ಲಾಭದಲ್ಲಿ ಶೇ 70ರಷ್ಟು ಹಂಚಿಕೆ ಮಾಡುವ ತೇಗ ಸಿರಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ರಾಮನಗರ | ಆಕಸ್ಮಿಕ ಅಗ್ನಿ ಅವಘಡಕ್ಕೆ ಹೊತ್ತಿ ಉರಿದ ಶಾಲಾ ಕೊಠಡಿ
ಬೆಂಗಳೂರು ಮತ್ತು ಸುತ್ತಮುತ್ತ ಸಿದ್ಧ ಉಡುಪಗಳನ್ನು ತಯಾರು ಮಾಡುವ ಕೈಗಾರಿಕೆಗಳಿವೆ. ಲಕ್ಷಾಂತರ ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೈಗಾರಿಕೆಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲೂ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ ‘ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2026-31ಯನ್ನು ತರಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಚುನಾವಣೆ ಪುನರಾರಂಭ:
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ವೃದ್ಧಿಗೊಳಿಸಲು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನಾರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಶಕ್ತಿ ಸ್ಮಾರ್ಟ್ ಕಾರ್ಡ್:
ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಒಂದು ಗುರುತನ್ನು ನೀಡುವ ಸಲುವಾಗಿ ಸ್ಮಾರ್ಟ್ ಕಾರ್ಡ್ ಕೊಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದರು.ಇದನ್ನೂ ಓದಿ: ಚರಂಡಿ ದಾಟಲು ವೃದ್ಧನ ಬೆನ್ನೇರಿ ಕುಳಿತ ಕಂದಾಯ ಅಧಿಕಾರಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನಗಳು ಪೂರ್ಣಗೊಂಡ ಹಿನ್ನೆಲೆ ಇಂದಿನಿಂದ ಈ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮವು ಸಂಭ್ರಮಾಚರಣೆಯಲ್ಲ, ನಮ್ಮ ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರವಾಗಿದೆ. ನಾವು ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ. ಕರ್ನಾಟಕದ ಪ್ರಗತಿ ಈ ದೇಶದ ಪ್ರಗತಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಡಾ. ಜಿ.ಪರಮೇಶ್ವರ್ ಅವರು ‘ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ’ಗೆ ಉಪಮುಖ್ಯಮಂತ್ರಿ ಚಾಲನೆ ನೀಡಿದರು. ಗ್ರಾಮೀಣ ಭಾಗದ ವಸತಿ ರಹಿತರಿಗೆ ಐದು ಲಕ್ಷ ನಿವೇಶನಗಳ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್ ಅವರು ಸೇರಿದಂತೆ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಉಪಸ್ಥಿತರಿದ್ದರು.ಇದನ್ನೂ ಓದಿ: ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್

