– 450ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ
– 5 ಕಿ.ಮೀ ಭದ್ರತಾ ವಲಯ
– 35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ನವದೆಹಲಿ: ರಾಜಧಾನಿ ದೆಹಲಿಯ ಪ್ರತಿಷ್ಠಿತ ಭಾರತ್ ಮಂಟಪಂನಲ್ಲಿ ನಾಳೆಯಿಂದ ಭಾನುವಾರದರೆಗೆ ನಡೆಯಿಂದಲಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ (BRICS Summit 2026) ದೆಹಲಿ ಸಂಪೂರ್ಣ ಸಜ್ಜಾಗಿದ್ದು, ಅಭೇದ್ಯ ಭದ್ರತಾ ಕೋಟೆಯನ್ನು ನಿರ್ಮಿಸಲಾಗಿದೆ.
ವಿಶ್ವದ ಪ್ರಭಾವಿ ರಾಷ್ಟ್ರಗಳ ಗಣ್ಯರು ಹಾಗೂ ಉನ್ನತ ಮಟ್ಟದ ನಿಯೋಗಗಳು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿಯಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸ್ (Delhi Police) ಹಾಗೂ ಸಂಚಾರ ವಿಭಾಗಗಳು ಬಹುಹಂತದ ಪ್ಲ್ಯಾನ್ ಮಾಡಿದೆ.
ಭದ್ರತಾ ಕಾರ್ಯಗಳಿಗಾಗಿ ಒಟ್ಟು 7,000 ಭದ್ರತಾ ಸಿಬ್ಬಂದಿ ಹಾಗೂ ವಾಹನ ಸಂಚಾರ ನಿಯಂತ್ರಣಕ್ಕಾಗಿ 4,800 ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭಾರತ್ ಮಂಟಪದ(Bharat Mandapam) ಸುತ್ತಮುತ್ತ ಮಾತ್ರವಲ್ಲದೆ ವಿಮಾನ ನಿಲ್ದಾಣದಿಂದ(Delhi Airport) ಗಣ್ಯರು ತಂಗುವ ಹೋಟೆಲ್‌ಗಳು ಮತ್ತು ಶೃಂಗಸಭೆಯ ಸ್ಥಳದವರೆಗಿನ ಸಂಪೂರ್ಣ ವಿವಿಐಪಿ (VVIP) ಮಾರ್ಗಗಳನ್ನು ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿವೆ.
ನೆಲ ಹಾಗೂ ಆಕಾಶ ಎರಡೂ ಮಾರ್ಗಗಳಲ್ಲೂ ಕಣ್ಗಾವಲು ವಹಿಸಲಾಗಿದೆ. ವಿವಿಐಪಿ ಸಂಚಾರದ ವೇಳೆ ಟ್ರಾಫಿಕ್ ನಿರ್ವಹಣೆಗಾಗಿ 22 ಪ್ರಮುಖ ಡೈವರ್ಶನ್ ಪಾಯಿಂಟ್‌ಗಳನ್ನು ಮತ್ತು 35 ಕ್ಕೂ ಹೆಚ್ಚು ಮುಖ್ಯ ರಸ್ತೆಗಳನ್ನು ಗುರುತಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಅಲ್ಲಿ ಸಾರ್ವಜನಿಕ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ ಅಥವಾ ಮಾರ್ಗ ಬದಲಿಸಲಾಗುತ್ತದೆ.

ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ದೆಹಲಿಯ ಪ್ರಮುಖ ಮಾರ್ಗಗಳಲ್ಲಿ 450ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಿವಿಐಪಿ ಗಣ್ಯರ ಚಲನವಲನದ ಮೇಲೆ 24 ಗಂಟೆಯೂ ನಿರಂತರ ಕಣ್ಗಾವಲು ಇರಿಸಲಾಗಿದೆ.
ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಾರತ್ ಮಂಟಪ, ಕನ್ನಾಟ್ ಪ್ಲೇಸ್, ಖಾನ್ ಮಾರ್ಕೆಟ್ ಸೇರಿದಂತೆ ನಗರದ ಪ್ರಮುಖ ತಾಣಗಳಲ್ಲಿ ಬ್ರಿಕ್ಸ್ ಬ್ಯಾನರ್‌ಗಳು ಹಾಗೂ ದೀಪಾಲಂಕಾರಗಳು ರಾರಾಜಿಸುತ್ತಿವೆ. ದೆಹಲಿ ಪೊಲೀಸ್, ಅರೆಸೇನಾ ಪಡೆಗಳು, ರಾಷ್ಟ್ರೀಯ ಭದ್ರತಾ ಪಡೆ (NSG), ಗುಪ್ತಚರ ದಳ (IB), ಮತ್ತು ವಿಶೇಷ ರಕ್ಷಣಾ ಗುಂಪು (SPG) ಜಂಟಿಯಾಗಿ ಭದ್ರತಾ ಜಾಲವನ್ನು ನಿರ್ವಹಿಸುತ್ತಿವೆ.
5 ಕಿ.ಮೀ ಭದ್ರತಾ ವಲಯ:
ಭಾರತ್ ಮಂಟಪಂ ಸುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಭೇದ್ಯ ಭದ್ರತೆ ಕಲ್ಪಿಸಲಾಗಿದೆ. ಹೊರಭಾಗದಲ್ಲಿ ದೆಹಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳು ಕಾವಲು ಕಾಯುತ್ತಿದ್ದರೆ, ಮುಖ್ಯ ಸ್ಥಳದ ಒಳಗೆ ಎನ್‌ಎಸ್‌ಜಿ ಕಮಾಂಡೋಗಳು ಹಾಗೂ ಎಸ್‌ಪಿಜಿ ಸಿಬ್ಬಂದಿ ಭದ್ರತೆ ವಹಿಸಿಕೊಂಡಿದ್ದಾರೆ. ಶೃಂಗಸಭೆ ಸ್ಥಳ, ಹೋಟೆಲ್‌ಗಳು, ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಪ್ರಮುಖ ತಾಣಗಳಲ್ಲಿ 7,000 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೋಟೆಲ್‌ಗಳಿಗೆ ಭದ್ರತೆ:
ವಿದೇಶಿ ಅತಿಥಿಗಳು ತಂಗಲಿರುವ ಸುಮಾರು 10 ಪ್ರಮುಖ ಹೋಟೆಲ್‌ಗಳ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ವಿಮಾನ ನಿಲ್ದಾಣದಿಂದ ಹೋಟೆಲ್‌ಗಳಿಗೆ ಹಾಗೂ ಹೋಟೆಲ್‌ನಿಂದ ಶೃಂಗಸಭೆಯ ವೇದಿಕೆಗೆ ತೆರಳುವ ರಸ್ತೆಗಳನ್ನು ವಿವಿಐಪಿ ಚಲನವಲನದ ವೇಳೆ ಸಂಪೂರ್ಣವಾಗಿ ಭದ್ರತಾ ಪಡೆಗಳ ವಶಕ್ಕೆ ಪಡೆಯಲಾಗುತ್ತದೆ.

ಪ್ರವೇಶಕ್ಕೆ ಕಠಿಣ ನಿಯಮ:
ಅಧಿಕೃತ ಪಾಸ್ ಹೊಂದಿರುವ ನಿಯೋಗದ ಸದಸ್ಯರು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶಾವಕಾಶವಿದೆ. ಸಿಸಿಟಿವಿ ಕಣ್ಗಾವಲು, ತಾಂತ್ರಿಕ ನಿಗಾ, ಬಯೋಮೆಟ್ರಿಕ್ ಪರಿಶೀಲನೆ ಹಾಗೂ ಪ್ರವೇಶ ದ್ವಾರಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ವಿಧ್ವಂಸಕ ಕೃತ್ಯ ತಡೆ ತಪಾಸಣೆಗಳು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು (BDDS) ಸದಾ ಸನ್ನದ್ಧ ಸ್ಥಿತಿಯಲ್ಲಿವೆ.
35ಕ್ಕೂ ಹೆಚ್ಚು ರಸ್ತೆಗಳಲ್ಲಿ ವ್ಯತ್ಯಯ:
ಗಣ್ಯರ ಬೆಂಗಾವಲು ಪಡೆಗಳು ಚಲಿಸುವ ವೇಳೆ 35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ. 4,800 ಸಂಚಾರ ಪೊಲೀಸರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ವಿವಿಐಪಿ ಸಂಚಾರಕ್ಕೆ ಅಡ್ಡಿಯಾಗದಂತೆ ಮಾರ್ಗ ಬದಲಾವಣೆಗಳನ್ನು ನಿರ್ವಹಿಸಲಿದ್ದಾರೆ.
ವಿಮಾನ ನಿಲ್ದಾಣ ಹಾಗೂ ನವದೆಹಲಿ ಸೇರಿದಂತೆ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ತೆರಳುವ ಸಾರ್ವಜನಿಕರು ಮುಂಚಿತವಾಗಿಯೇ ಹೊರಡಲು ಹಾಗೂ ಮಾರ್ಗ ಬದಲಾವಣೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಗರಿಷ್ಠ ಮಟ್ಟದಲ್ಲಿ ದೆಹಲಿ ಮೆಟ್ರೋ ಬಳಸುವಂತೆ ಕೋರಲಾಗಿದೆ.
ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಸುಗಮ ಚಲನೆಗೆ ಗ್ರೀನ್ ಕಾರಿಡಾರ್ ಸೇರಿದಂತೆ ವಿಶೇಷ ಆದ್ಯತೆ ನೀಡಲಾಗುತ್ತದೆ. ವಿವಿಐಪಿ ವಾಹನಗಳ ಮೇಲೆ ಜಿಪಿಎಸ್ ಮೂಲಕ ರಿಯಲ್-ಟೈಮ್ ನಿಗಾ ಇಡಲಾಗುತ್ತಿದ್ದು, ಅನುಮತಿಯಿಲ್ಲದ ಡ್ರೋನ್‌ಗಳು ಮತ್ತು ಹಾರುವ ವಸ್ತುಗಳ ಮೇಲೆ ನಿಷೇಧ ಹೇರಲಾಗಿದೆ. ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಚಂಡೀಗಢ ಭದ್ರತಾ ಪಡೆಗಳ ಸಹಯೋಗದೊಂದಿಗೆ ಗಡಿ ಭಾಗಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.
ಶಾಲೆ, ಕಚೇರಿಗಳಿಗೆ ರಜೆ:
ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸೆಪ್ಟೆಂಬರ್ 11 ರಂದು ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಗೂ ರಜೆ ಇರಲಿದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ (WFH) ನೀಡುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ 11 ರಿಂದ 13 ರವರೆಗೆ ಅತಿ ತುರ್ತು ಕೆಲಸಗಳಿಲ್ಲದಿದ್ದರೆ ನವದೆಹಲಿಯ ಸೂಕ್ಷ್ಮ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಹಾಗೂ ಮೆಟ್ರೋ ರೈಲುಗಳನ್ನು ಬಳಸುವಂತೆ ದೆಹಲಿ ಸಂಚಾರ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

