– ಬ್ಯಾಲೆಟ್ ಪೇಪರ್ಗಳ ಮೂಲಕ ಚುನಾವಣೆ ನಡೆಸಲು ಆಗ್ರಹ
ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಇಂಡಿ ಒಕ್ಕೂಟ ಸಮರ ಸಾರಿದೆ. ಇಬ್ಬರು ಚುನಾವಣಾ ಆಯುಕ್ತರ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಇಂಡಿ ಒಕ್ಕೂಟ ಇವತ್ತು ಸಭೆ ಕರೆಸಿ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಇಂಡಿಯಾ (INDIA) ಒಕ್ಕೂಟದ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 20 ವಿರೋಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ವರ್ಚುವಲ್ ಆಗಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಆಮ್ ಆದ್ಮಿ ಪಕ್ಷ (ಆಪ್) ಈ ಸಭೆಯಿಂದ ದೂರ ಉಳಿದಿತ್ತು. ಇದನ್ನೂ ಓದಿ: 2,700 ಬೆಲೆಯ ಕ್ಯಾನ್ಸರ್ ಔಷಧಿಗೆ 27,000 ರೂ. ನಿಗದಿ: ಇದು ಹಗಲು ದರೋಡೆ ಅಲ್ಲದೆ ಮತ್ತೇನು?: ಸುಪ್ರೀಂ ಕೆಂಡಾಮಂಡಲ
ಚುನಾವಣಾ ಆಯೋಗದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿರುವ ಇಂಡಿಯಾ ಒಕ್ಕೂಟವು ದೇಶಾದ್ಯಂತ ಸರಣಿ ಪ್ರತಿಭಟನೆಗಳನ್ನು ಘೋಷಿಸಿದೆ. ಅಕ್ಟೋಬರ್ 2 ರಿಂದ ಅಕ್ಟೋಬರ್ 8 ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ ಜಾಥಾ, ಅಕ್ಟೋಬರ್ 6 ವಿರೋಧ ಪಕ್ಷಗಳ ಸಂಸದರಿಂದ ಭಾರತೀಯ ಚುನಾವಣಾ ಆಯೋಗಕ್ಕೆ ಬೃಹತ್ ಜಾಥಾ. ನವೆಂಬರ್ 1 ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
SIR ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಕೋಟ್ಯಂತರ ಅರ್ಹ ಮತದಾರರನ್ನು ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಪ್ರದೇಶಗಳ ಮತಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. ಇದನ್ನೂ ಓದಿ: ಟಿಪ್ಪು ಜಯಂತಿ ಬಳಿಕ ಉರ್ದು ಹಬ್ಬ- ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ
ಈ ಪ್ರಕ್ರಿಯೆಯ ಮೂಲಕ ಸುಮಾರು 13.3 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ದೇಶದ ಒಟ್ಟು ಮತದಾರರ ಸುಮಾರು ಶೇ. 13 ರಷ್ಟಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಸಭೆಯಲ್ಲಿ ಕೇವಲ ಮತದಾರರ ಪಟ್ಟಿಯ ಅಕ್ರಮಗಳಷ್ಟೇ ಅಲ್ಲದೆ, ಮುಂಬರುವ ಚುನಾವಣೆಗಳನ್ನು ಇವಿಎಂ (EVM) ಗಳ ಬದಲಾಗಿ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ನಡೆಸಬೇಕು ಎಂದು ಒಕ್ಕೂಟದ ಎಲ್ಲಾ ನಾಯಕರು ಒಮ್ಮತದಿಂದ ಒತ್ತಾಯಿಸಿದ್ದಾರೆ. ಇವಿಎಂಗಳ ಸುರಕ್ಷತೆಯ ಬಗ್ಗೆ ನಂಬಿಕೆ ಇಲ್ಲದ ಕಾರಣ, ಪ್ರಜಾಪ್ರಭುತ್ವವನ್ನು ಉಳಿಸಲು ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳುವುದು ಅನಿವಾರ್ಯ ಎಂದು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಪ್ರತಿಪಾದಿಸಿದರು.
ಸಭೆಯಿಂದ ದೂರ ಉಳಿದಿದ್ದರೂ ತಮಿಳುನಾಡಿನ ವಿರೋಧ ಪಕ್ಷವಾದ ಡಿಎಂಕೆ, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ತರುವ ಯಾವುದೇ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ವಿಮಾನ ಪತನಕ್ಕೆ ಯತ್ನ, ದುರಂತ ತಪ್ಪಿಸಿದ ಪ್ರಯಾಣಿಕರು ನಿಜವಾದ ವೀರರು: ಬೆಂಜಮಿನ್ ನೆತನ್ಯಾಹು

