ನವದೆಹಲಿ: ಜೀವರಕ್ಷಕ ಔಷಧಗಳನ್ನು ದುಬಾರಿ ಬೆಲೆಗೆ ಮಾರಿ ರೋಗಿಗಳನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು (Private Hospital) ಹಾಗೂ ಔಷಧ ಮಾರುಕಟ್ಟೆಯ ಮಾಫಿಯಾ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ತೀವ್ರ ಕೆಂಡಕಾರಿದೆ.
ಔಷಧಗಳ ಮೂಲ ಖರೀದಿ ದರ (Price to Retailer – PTR) ಮತ್ತು ಗರಿಷ್ಠ ಮಾರಾಟ ಬೆಲೆ (MRP) ನಡುವಿನ ಅಸಹಜ ವ್ಯತ್ಯಾಸವನ್ನು ಕಟುವಾಗಿ ಖಂಡಿಸಿರುವ ನ್ಯಾಯಾಲಯ, “ಇದು ನೇರವಾದ ನರಮೇಧ ಮತ್ತು ರೋಗಿಗಳ ಮೇಲೆ ನಡೆಯುತ್ತಿರುವ ಹಗಲು ದರೋಡೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಕುರಿತ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಮತ್ತು ಔಷಧ ನಿಯಂತ್ರಣ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತು.
ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ಬಳಸುವ ಔಷಧವೊಂದು(Medicine) ಚಿಲ್ಲರೆ ವ್ಯಾಪಾರಿಗೆ 2,700 ರೂ.ಗೆ ಸಿಗುತ್ತದೆ. ಆದರೆ ಅದರ ಮೇಲೆ 27,000 ರೂ. ಎಂಆರ್ಪಿ ಮುದ್ರಿಸಲಾಗಿದೆ. ಇದೇ ರೀತಿ 3,520 ರೂ. ಇಂಜೆಕ್ಷನ್ಗೆ 22,347 ರೂ. ನಿಗದಿಪಡಿಸಲಾಗಿದೆ. ಖರೀದಿ ದರಕ್ಕಿಂತ 10 ಪಟ್ಟು ಅಧಿಕ ಬೆಲೆ ನಿಗದಿಪಡಿಸುವ ಈ ಹೆಚ್ಚುವರಿ ಹಣ ಯಾರ ಜೇಬಿಗೆ ಹೋಗುತ್ತಿದೆ? ಇದರಿಂದ ಯಾರಿಗೆ ಲಾಭವಾಗುತ್ತಿದೆ ಎಂದು ಪೀಠ ನೇರವಾಗಿ ಪ್ರಶ್ನಿಸಿತು.
ಕಾರ್ಪೊರೇಟ್ ಆಸ್ಪತ್ರೆಗಳು ವೈದ್ಯಕೀಯ ರಂಗವನ್ನು ಕೇವಲ ಲಾಭಕೋರ ಕೈಗಾರಿಕೆಯನ್ನಾಗಿ ಮಾಡಿಕೊಂಡಿವೆ, ಅದರಲ್ಲಿ ಸೇವೆಯ ಲವಲೇಶವೂ ಉಳಿದಿಲ್ಲ. ಹಣ ಪಾವತಿಸದಿದ್ದರೆ ಶವವನ್ನೂ ಬಿಟ್ಟುಕೊಡುವುದಿಲ್ಲ. ಜನರು ಚಿಕಿತ್ಸೆಗಾಗಿ ಮನೆ, ಚಿನ್ನಾಭರಣ ಮಾರಿಕೊಳ್ಳುತ್ತಿದ್ದರೆ, ಇತ್ತ ಆಸ್ಪತ್ರೆಗಳು ಮಾತ್ರ ಅಕ್ರಮ ಲಾಭ ಗಿಟ್ಟಿಸಿಕೊಳ್ಳುತ್ತಿವೆ ಎಂದು ಪೀಠ ಕಟುವಾಗಿ ನುಡಿಯಿತು.

ಆಯುಷ್ಮಾನ್ ಭಾರತ್ ಮುಂತಾದ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಪಡೆಯುವಾಗ ಸರ್ಕಾರವೇ ಈ ದುಬಾರಿ ಬಿಲ್ಗಳನ್ನು ಭರಿಸಬೇಕಾಗುತ್ತದೆ. ಅಂತಿಮವಾಗಿ ಪ್ರಾಮಾಣಿಕ ತೆರಿಗೆದಾರರ ಹಣ ಈ ರೀತಿಯ ಅತಿಯಾದ ಎಂಆರ್ಪಿ ಮೂಲಕ ಲೂಟಿಯಾಗುತ್ತಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು. ಇದನ್ನೂ ಓದಿ: ಕಾಕ್ಪಿಟ್ನಲ್ಲಿ ಪೈಲಟ್ನಿಂದ ಮಾರಣಾಂತಿಕ ಹಲ್ಲೆ ನಡೆದರೂ 174 ಜೀವ ರಕ್ಷಿಸಿದ್ದು ಭಾರತೀಯ ಕ್ಯಾಪ್ಟನ್!
ಕೇಂದ್ರ ಸರ್ಕಾರಕ್ಕೆ ಖಡಕ್ ಪ್ರಶ್ನೆಗಳು:
ಅಗತ್ಯ ಔಷಧಗಳು ಮತ್ತು ನಿಯಂತ್ರಣವಿಲ್ಲದ ಇತರ ಔಷಧಗಳು ಎಂಬ ಭೇದಭಾವ ಏಕೆ? ಔಷಧ ಬೆಲೆ ನಿಯಂತ್ರಣ ಆದೇಶದ (DPCO) ಅಡಿಯಲ್ಲಿ ಎಲ್ಲಾ ಔಷಧಗಳ ಎಂಆರ್ಪಿ ಮೇಲೂ ಏಕರೂಪವಾಗಿ ಗರಿಷ್ಠ 16% ಲಾಭಾಂಶ ಮಿತಿ (Margin) ಹೇರಲು ಸಾಧ್ಯವಿಲ್ಲವೇ? ದೇಶದ ಶೇಕಡಾ 80ಕ್ಕೂ ಹೆಚ್ಚು ಔಷಧಗಳು ಬೆಲೆ ನಿಯಂತ್ರಣದ (Schedule List) ವ್ಯಾಪ್ತಿಯಿಂದ ಹೊರಗುಳಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಎಲ್ಲಾ ಔಷಧಗಳು ಹಾಗೂ ವೈದ್ಯಕೀಯ ಸಾಧನಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ತಂದು ಬೆಲೆ ನಿಯಂತ್ರಿಸುವುದು ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ವಿಷಯ ಅತ್ಯಂತ ಗಂಭೀರವಾಗಿದ್ದು, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಮತೋಲನ ಸೂತ್ರ ಕಂಡುಕೊಳ್ಳಲು ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಆಳವಾಗಿ ಪರಿಶೀಲಿಸುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿತು.

