ಬಾಗಲಕೋಟೆ: ವ್ಯಕ್ತಿಯಯೋರ್ವ ಕಾಣೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಬಾವಿಯಲ್ಲಿ ಇದೀಗ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ವೈದ್ಯ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ (Hunagund) ತಾಲೂಕಿನ ಹೂವನೂರು ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ರಹಸ್ಯ ಬಯಲಾಗಿದ್ದು, ಕಾಣೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಎರಡು ಟ್ರಂಕ್ಗಳಲ್ಲಿ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯ ಮೊಬೈಲ್ನಿಂದ 150 ರೂ. ವರ್ಗಾವಣೆಯಾದ ಸುಳಿವಿನ ಮೂಲಕ ಈ ಕೊಲೆ ರಹಸ್ಯ ಪತ್ತೆಯಾಗಿದೆ. ಅಶೋಕ ಅಂಗಡಿ (64) ಕೊಲೆಯಾದ ವ್ಯಕ್ತಿಯಾಗಿದ್ದು, ಆರ್ಎಂಪಿ ವೈದ್ಯ ಸುದೀಪ (24), ಆತನ ಸಹೋದರ ಸಂದೀಪ (25), ರಮೇಶ್, ಸಂಗನಗೌಡ ಮತ್ತು ಇತರೆ ಇಬ್ಬರು ಸೇರಿ ಈ ಕೊಲೆ ಮಾಡಿದ್ದು, ಈ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ ಸ್ಟಾಲಿನ್ ಸೋಲಿಸಿದ್ದ ಟಿವಿಕೆ ಶಾಸಕ ವಿ.ಎಸ್ ಬಾಬು ನಿಧನ
ಸಾಲ ಹಾಗೂ ಬಾಡಿಗೆ ಹಣ ಕೇಳಿದ್ದಕ್ಕೆ ಕೊಲೆ:
ಒಂದೂವರೆ ಲಕ್ಷ ರೂಪಾಯಿ ಸಾಲದ ಹಣ, ಆಸ್ಪತ್ರೆ ಹಾಗೂ ಮನೆ ಬಾಡಿಗೆಯನ್ನು ಮರಳಿ ಕೇಳಿದ್ದಕ್ಕೆ ಆರೋಪಿಗಳು ಆಕ್ರೋಶಗೊಂಡು ಈ ಕೊಲೆ ಮಾಡಿದ್ದಾರೆ. ಮೃತ ಅಶೋಕ ಅವರ ಕಾಂಪ್ಲೆಕ್ಸ್ನಲ್ಲಿ ಆರೋಪಿಗಳು ಆಸ್ಪತ್ರೆ ಮತ್ತು ಬಟ್ಟೆ ಅಂಗಡಿ ತೆರೆದಿದ್ದರು. ಹೀಗಾಗಿ ಮನೆ, ಆಸ್ಪತ್ರೆ ಮತ್ತು ಬಟ್ಟೆ ಅಂಗಡಿಯ ಬಾಡಿಗೆ ಕೇಳಿದ್ದಕ್ಕಾಗಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಮೂರು ಭಾಗಗಳಾಗಿ ದೇಹ ತುಂಡರಿಸಿ ಟ್ರಂಕ್ಗೆ ಎಸೆದ ಆರೋಪಿಗಳು:
ಆರೋಪಿಗಳು ರಾಡ್ನಿಂದ ಹೊಡೆದು ಕೊಲೆ ಮಾಡಿ, ಬಳಿಕ ದೇಹವನ್ನು ಒಟ್ಟು ಮೂರು ಭಾಗಗಳಾಗಿ ತುಂಡರಿಸಿದ್ದಾರೆ. ತಲೆ ಮತ್ತು ಕಾಲುಗಳನ್ನು ಒಂದು ಟ್ರಂಕ್ನಲ್ಲಿ ಹಾಗೂ ಕೈ ಮತ್ತು ದೇಹದ ಭಾಗವನ್ನು ಮತ್ತೊಂದು ಟ್ರಂಕ್ನಲ್ಲಿ ತುಂಬಿ, ಟ್ರಂಕ್ಗಳಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ. ಹೂವನೂರು ಗ್ರಾಮದಲ್ಲಿ ಕೊಲೆ ನಡೆದಿದ್ದು, ಶವವನ್ನು ವಿಜಯಪುರ ನಗರದ ಬಾವಿಯೊಂದರಲ್ಲಿ ಎಸೆಯಲಾಗಿದೆ.ಇದನ್ನೂ ಓದಿ: ಟ್ರೈನ್ನಿಂದ ಜಿಗಿದು MLC ನಮೋಶಿ ಆಪ್ತ ಸಹಾಯಕ ಅನುಮಾನಾಸ್ಪದ ಸಾವು
ಹುಡುಕಾಟದ ಡ್ರಾಮಾ, ಕೊಲೆ ನಡೆದ ಮನೆಯಲ್ಲೇ ದೀಪಾವಳಿ ಆಚರಣೆ
ಮರ್ಚ್ 12ರಂದು ಈ ಕೊಲೆ ನಡೆದಿದ್ದು, ಅಂದಿನಿಂದ ಅಶೋಕ ಅಂಗಡಿ ನಾಪತ್ತೆಯಾಗಿದ್ದರು. ಮರ್ಚ್ 14ರಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಕೊಲೆ ಮಾಡಿದ ನಂತರ ಆರೋಪಿಗಳು ತಾವು ಕೂಡ ಅಶೋಕ ಅವರ ಕುಟುಂಬಸ್ಥರ ಜೊತೆ ಹುಡುಕಾಟದ ಡ್ರಾಮಾ ಮಾಡಿದ್ದರು. ಅಲ್ಲದೆ, ಕೊಲೆ ಮಾಡಿದ ಮನೆಯಲ್ಲೇ ದೀಪಾವಳಿ ಆಚರಿಸಿದ್ದು, ಕೊಲೆಯಾದವರ ಮನೆಯಲ್ಲೇ ದೀಪಾವಳಿ ಊಟವನ್ನೂ ಮಾಡಿದ್ದರು.
ಇತ್ತೀಚೆಗೆ ಸುದೀಪ್ ಹಾಗೂ ಸಂದೀಪ ಆ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದರು. ಈ ವೇಳೆ ಪೊಲೀಸರಿಗೆ ಸುದೀಪ ಮತ್ತು ಸಂದೀಪ ಮೇಲೆ ಸಂಶಯ ಜೋರಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿ ಸಹೋದರರು ಸತ್ಯ ಬಾಯ್ಬಿಟ್ಟಿದ್ದಾರೆ.ಇದನ್ನೂ ಓದಿ: ನಾವು ಕಟ್ಟಿದ ಹಣ ಕೂಡ ವಾಪಸ್ ಬಂದಿಲ್ಲ – ಬೆಳೆ ವಿಮೆ ಹಂಚಿಕೆ ತಾರತಮ್ಯದ ವಿರುದ್ಧ ಸಿಡಿದೆದ್ದ ರೈತರು
