ಟೆಲ್ ಅವಿವ್: ಫ್ಲೈದುಬೈ ವಿಮಾನದಲ್ಲಿ(Fly Dubai) ಸಂಭವಿಸಿದ ಭೀಕರ ಘಟನೆಯನ್ನು ಅತ್ಯಂತ ಗಂಭೀರ ಭದ್ರತಾ ಲೋಪ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಕರೆದಿದ್ದಾರೆ.
ವಿಮಾನ ಪತನಗೊಳಿಸಲು ಯತ್ನಿಸುತ್ತಿದ್ದ ದಾಳಿಕೋರ ಪೈಲಟ್‌ನನ್ನು(Pilot) ಕಾಕ್‌ಪಿಟ್‌ಗೆ ನುಗ್ಗಿ ಸದೆಬಡಿದು ಭಾರಿ ದುರಂತ ತಪ್ಪಿಸಿದ ಪ್ರಯಾಣಿಕರು ನಿಜವಾದ ವೀರರು, ಅವರಿಗೆ ನನ್ನ ಸೆಲ್ಯೂಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಿಗ್ಗೆ ನಡೆದ ಈ ಘಟನೆಯ ಕುರಿತು ಅಧಿಕೃತವಾಗಿ ಮೊದಲ ಹೇಳಿಕೆ ಬಿಡುಗಡೆ ಮಾಡಿರುವ ನೆತನ್ಯಾಹು, ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ಹಿಡಿದು ನಿಯಂತ್ರಿಸಿದ ಇಸ್ರೇಲಿ ಪ್ರಯಾಣಿಕರೊಬ್ಬರೊಂದಿಗೆ ತಾವು ನೇರವಾಗಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಕ್‌ಪಿಟ್‌ನಲ್ಲಿ ಪೈಲಟ್‌ನಿಂದ ಮಾರಣಾಂತಿಕ ಹಲ್ಲೆ ನಡೆದರೂ 174 ಜೀವ ರಕ್ಷಿಸಿದ್ದು ಭಾರತೀಯ ಕ್ಯಾಪ್ಟನ್!
ನೆತನ್ಯಾಹು ಹೇಳಿದ್ದೇನು?
ಇಂದು ಬೆಳಿಗ್ಗೆ ಇಸ್ರೇಲ್‌ಗೆ ಬರುತ್ತಿದ್ದ ವಿಮಾನದಲ್ಲಿ ಅತ್ಯಂತ ಗಂಭೀರ ಭದ್ರತಾ ಘಟನೆಯೊಂದು ನಡೆದಿದೆ. ವಿಮಾನದಲ್ಲಿದ್ದ ಬಹುಪಾಲು ಮಂದಿ ಇಸ್ರೇಲಿ ನಾಗರಿಕರೇ ಆಗಿದ್ದರು. ವಿಮಾನವು ಇಸ್ರೇಲ್ ಸಮೀಪಿಸುತ್ತಿದ್ದಂತೆ, ಓರ್ವ ಪೈಲಟ್ ಮತ್ತೋರ್ವ ಪೈಲಟ್‌ಗೆ ಚಾಕುವಿನಿಂದ ಇರಿದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ.
BREAKING: Prime Minister Benjamin Netanyahu has made his first public statement following the suspected attempted hijacking of the FlyDubai flight carrying Israelis. pic.twitter.com/TvgU2hev7f
— Mossad Commentary (@MOSSADil) September 30, 2026
ಕಾಕ್‌ಪಿಟ್ ಒಳಗೆ ನುಗ್ಗುವಲ್ಲಿ ಯಶಸ್ವಿಯಾದ ಓರ್ವ ಇಸ್ರೇಲಿ ಪ್ರಯಾಣಿಕನೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದೆ. ಆತ ವಿಮಾನ ಸಿಬ್ಬಂದಿಯೊಬ್ಬರೊಂದಿಗೆ ಹೇಗೋ ಕಾಕ್‌ಪಿಟ್ ಬಾಗಿಲು ಮುರಿದು ಒಳನುಗ್ಗಿದ್ದಾನೆ. ಆ ವೇಳೆ ದಾಳಿಕೋರ ಪೈಲಟ್ ವಿಮಾನದ ಸ್ವಯಂಚಾಲಿತ ವ್ಯವಸ್ಥೆಗಳನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದ. ಪ್ರಯಾಣಿಕರು ಮತ್ತು ಸಿಬ್ಬಂದಿ ತಕ್ಷಣ ಆತನನ್ನು ಹಿಡಿದು ನಿಷ್ಕ್ರಿಯಗೊಳಿಸಿದ್ದಾರೆ. ಬಳಿಕ ಮತ್ತೋರ್ವ ಸಿಬ್ಬಂದಿ ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ಸಮತೋಲನಕ್ಕೆ ತಂದಿದ್ದಾರೆ.
ಅಸಾಧಾರಣ ಸಮಯಪ್ರಜ್ಞೆ ಮತ್ತು ಅದಮ್ಯ ಧೈರ್ಯ ತೋರಿದ ಈ ನಾಯಕರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಅವರು ಹಲವು ಅಮೂಲ್ಯ ಜೀವಗಳನ್ನು ಉಳಿಸಿದ್ದಲ್ಲದೆ, ಸಂಭವಿಸಬೇಕಿದ್ದ ಭೀಕರ ಮಹಾ ದುರಂತವನ್ನು ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಗನದಲ್ಲೇ ಪೈಲಟ್‌ಗಳ ರಕ್ತಸಿಕ್ತ ಕಾದಾಟ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್- ತಪ್ಪಿತು ದುರಂತ
ವಿಚಾರಣೆ ಆರಂಭ:
ದಾಳಿ ನಡೆಸಿದ ಪೈಲಟ್‌ನನ್ನು ಸೌದಿ ಅರೇಬಿಯಾದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಸದ್ಯ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ಅವರನ್ನು ತಾಯ್ನಾಡಿಗೆ ಮರಳಿ ಕರೆತರಲು ಸೌದಿ ಅರೇಬಿಯಾದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಇತರ ಸಂಭಾವ್ಯ ಭದ್ರತಾ ಬೆದರಿಕೆಗಳನ್ನು ಎದುರಿಸಲು ಸಜ್ಜಾಗಿರುವಂತೆ ಇಸ್ರೇಲ್‌ನ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಆದೇಶಿಸಲಾಗಿದೆ. ಸದ್ಯದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

