– ಕೇವಲ 2 ನಿಮಿಷದಲ್ಲಿ 17,000 ಅಡಿ ಕೆಳಕ್ಕುರುಳಿದ ವಿಮಾನ
– ಯುದ್ಧ ವಿಮಾನಗಳನ್ನು ರವಾನಿಸಿದ್ದ ಇಸ್ರೇಲ್
ಟೆಲ್ ಅವಿವ್/ ರಿಯಾದ್: ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ದುಬೈನಿಂದ ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್‌ಗೆ(Tel Aviv) ತೆರಳುತ್ತಿದ್ದ ವಾಣಿಜ್ಯ ವಿಮಾನವೊಂದರಲ್ಲಿ ಹಾರಾಟದ ನಡುವೆಯೇ ಇಬ್ಬರು ಪೈಲಟ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ವಿಮಾನವನ್ನು ತುರ್ತಾಗಿ ಸೌದಿ ಅರೇಬಿಯಾದಲ್ಲಿ(Saudi Arabia) ಲ್ಯಾಂಡ್ ಮಾಡಲಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪರಿಸ್ಥಿತಿ ನಿಯಂತ್ರಿಸಿದ್ದರಿಂದ ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಹಾಗೂ ಭದ್ರತಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾಕ್‌ಪಿಟ್‌ನಲ್ಲಿ ನಡೆದ ಘರ್ಷಣೆಯ ವೇಳೆ ಅಪಹರಣ (Hijack) ಸಂಕೇತ ಪ್ರಸಾರವಾದ ಕಾರಣ, ಇಸ್ರೇಲ್ ಸೇನೆ ಎಚ್ಚೆತ್ತುಕೊಂಡು ಕೂಡಲೇ ಯುದ್ಧ ವಿಮಾನಗಳನ್ನು ರವಾನಿಸಿತ್ತು.
ವಿಮಾನದಲ್ಲಿ ನಡೆದಿದ್ದೇನು?
ಫ್ಲೈಟ್-ಟ್ರ್ಯಾಕಿಂಗ್ ಅಂಕಿಅಂಶಗಳ ಪ್ರಕಾರ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಫ್ಲೈದುಬೈ(Fly Dubai) ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ತುರ್ತು ಪರಿಸ್ಥಿತಿಯ ಎಚ್ಚರಿಕೆಯ ಸಂಕೇತವನ್ನು ರವಾನಿಸಿತು.
ಆರಂಭದಲ್ಲಿ ವಿಮಾನವು ಸಾಮಾನ್ಯ ತುರ್ತು ಪರಿಸ್ಥಿತಿಯ ಸಂಕೇತವಾದ ಸ್ಕ್ವಾಕ್ ಕೋಡ್ 7700 (Squawk code 7700) ಅನ್ನು ಕಳುಹಿಸಿತ್ತು. ಆದರೆ ಕ್ಷಣಾರ್ಧದಲ್ಲೇ ಅದನ್ನು ʼಕೋಡ್ 7500’ಕ್ಕೆ ಬದಲಾಯಿಸಿತು. ಅಂತಾರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ ‘7500’ ಕೋಡ್ ವಿಮಾನವನ್ನು ಯಾರೋ ಹೈಜಾಕ್ ಮಾಡಿದ್ದಾರೆ ಅಥವಾ ಕಾನೂನುಬಾಹಿರವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.
Imágenes dentro del avión de Fly Dubai que intentó ser secuestrado pic.twitter.com/bonpUeGTFI
— SissiEmperatriz 🇮🇱 (@GabyLob) September 30, 2026
ಕಾಕ್‌ಪೀಟ್‌ನಲ್ಲಿ ಕಿತ್ತಾಟ
ವಿಮಾನ ಅಪಹರಣವಾಗಿದೆ ಎಂಬ ಆತಂಕ ಸೃಷ್ಟಿಯಾಗಿದ್ದರೂ, ತನಿಖೆಯ ವೇಳೆ ಕಾಕ್‌ಪಿಟ್ ಒಳಗೆ ಇಬ್ಬರು ಪೈಲಟ್‌ಗಳ ನಡುವೆ ನಡೆದ ಭೀಕರ ಮಾರಾಮಾರಿಯೇ ಇದಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಪೈಲಟ್‌ಗಳ ನಡುವೆ ಗಂಭೀರ ಮಾತಿನ ಚಕಮಕಿ ನಡೆದು, ಓರ್ವ ಪೈಲಟ್ ಮತ್ತೋರ್ವನಿಗೆ ಮಡಚುವ ಚಾಕುವಿನಿಂದ (Folding knife) ಇರಿದಿದ್ದಾನೆ.
ಗಲಾಟೆಯ ನಡುವೆ ಓರ್ವ ಪೈಲಟ್ ವಿಮಾನವನ್ನು ಅಪಘಾತಕ್ಕೀಡುಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಹಾಗೂ ಈ ಹೊಡೆದಾಟದ ನಡುವೆಯೇ ‘ಹೈಜಾಕ್ ಕೋಡ್’ ಆ್ಯಕ್ಟಿವೇಟ್ ಆಯಿತು ಎಂದು ವರದಿಗಳು ತಿಳಿಸಿವೆ.
ವಿಮಾನದಲ್ಲಿದ್ದ ಪ್ರಯಾಣಿಕರು ಇಸ್ರೇಲ್‌ನ ಚಾನೆಲ್ 15 ಜೊತೆ ಮಾತನಾಡಿ, “ಹಾರಾಟದ ವೇಳೆ ಕಾಕ್‌ಪಿಟ್‌ನಿಂದ ಭಾರೀ ಚೀರಾಟ ಕೇಳಿಬಂತು. ಕಾಕ್‌ಪಿಟ್ ಬಾಗಿಲು ತೆರೆದಾಗ ಒಳಗೆಲ್ಲ ರಕ್ತ ಹರಡಿತ್ತು. ಒಬ್ಬ ಪೈಲಟ್‌ಗೆ ಚಾಕುವಿನಿಂದ ಇರಿಯಲಾಗಿತ್ತು. ತಕ್ಷಣವೇ ಇತರ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ದಾಳಿ ನಡೆಸಿದ ಪೈಲಟ್‌ನನ್ನು ಹಿಡಿದು ನಿಯಂತ್ರಿಸಿದರು. ಆ ಕ್ಷಣದಲ್ಲಿ ನಾವು ಜೀವಂತವಾಗಿ ಉಳಿಯುವುದಿಲ್ಲ ಎಂದೇ ಭಾವಿಸಿದ್ದೆವು” ಎಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
In een video, opgenomen vlak na de vechtpartij aan boord van het Flydubai-vliegtuig, zegt een bebloede Israelische passagier: ‘We zijn hier tijdens de kaping van een vliegtuig. We hebben de terroristen inmiddels overmeesterd en zetten de landing in. Iedereen die dit hoort: we… pic.twitter.com/L4hmJ6hNxp
— CIDI (@CIDI_nieuws) September 30, 2026
17,000 ಅಡಿ ಕುಸಿದ ವಿಮಾನ
ಪೈಲಟ್‌ಗಳ ಕಾದಾಟದ ವೇಳೆ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಬರೋಬ್ಬರಿ 17,400 ಅಡಿಗೆ ಕುಸಿದಿತ್ತು. 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವು ಒಮ್ಮಿಂದೊಮ್ಮೆಲೆ 16,600 ಅಡಿಗೆ ಕುಸಿದಾಗ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಸೌದಿ ಅರೇಬಿಯಾದ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಯುದ್ಧ ವಿಮಾನಗಳನ್ನು ರವಾನಿಸಿದ್ದ ಇಸ್ರೇಲ್
ಸುಮಾರು 180 ಇಸ್ರೇಲಿ ನಾಗರಿಕರಿದ್ದ ವಿಮಾನದಿಂದ ಹೈಜಾಕ್ ಕೋಡ್ ರವಾನೆಯಾಗುತ್ತಿದ್ದಂತೆಯೇ ಇಸ್ರೇಲ್ ರಕ್ಷಣಾ ಪಡೆ ತಕ್ಷಣವೇ ಅಲರ್ಟ್ ಆಗಿ ಯುದ್ಧ ವಿಮಾನಗಳನ್ನು (Fighter jets) ಗಗನಕ್ಕೆ ಕಳುಹಿಸಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಭದ್ರತಾ ಸಮಾಲೋಚನೆ ನಡೆಸಿ ಬೆಳವಣಿಗೆಗಳನ್ನು ಗಮನಿಸಿದರು.
“ಘಟನೆ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಇಸ್ರೇಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ನೆತನ್ಯಾಹು ಅವರ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
2020 ರಲ್ಲಿ ಯುಎಇ ಮತ್ತು ಇಸ್ರೇಲ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟ ನಂತರ ಉಭಯ ದೇಶಗಳ ನಡುವೆ ವಾಣಿಜ್ಯ ವಿಮಾನ ಸಂಚಾರ ಸಕ್ರಿಯವಾಗಿದೆ. ಹಲವು ದಶಕಗಳಿಂದ ಇಂತಹ ಯಾವುದೇ ಅಪಹರಣ ಘಟನೆಗಳನ್ನು ಎದುರಿಸದ ಇಸ್ರೇಲ್ ಅತ್ಯಂತ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದು, ಸದ್ಯ ಪೈಲಟ್‌ಗಳ ನಡುವಿನ ಈ ಕಾದಾಟಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
مطار الأمير سلطان بن عبد العزيز الدولي في تبوك:
– تلقى مركز المراقبة الجوية اليوم نداء استغاثة من الرحلة رقم (FZ1073) التابعة لطيران فلاي دبي للقيام بهبوط اضطراري في المطار في الساعة 8:44 صباحا– أعلنت حالة الطوارئ في المطار والتأهب لتقديم المساعدة للطائرة وهبطت الطائرة… pic.twitter.com/aug0pr5E8q
— قناة الإخبارية (@alekhbariyatv) September 30, 2026
ಸೌದಿ ಹೇಳಿದ್ದೇನು?
ಘಟನೆಯ ಬೆನ್ನಲ್ಲೇ ತಬೂಕ್ ವಿಮಾನ ನಿಲ್ದಾಣದ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಕೇಂದ್ರಕ್ಕೆ ಇಂದು ಬೆಳಿಗ್ಗೆ 8:44 ಕ್ಕೆ ಫ್ಲೈದುಬೈ ನಿರ್ವಹಿಸುತ್ತಿದ್ದ ವಿಮಾನದಿಂದ ತುರ್ತು ಲ್ಯಾಂಡಿಂಗ್ ಮಾಡಲು ಅಪಾಯದ ಸಂದೇಶ ಸ್ವೀಕರಿಸಲಾಯಿತು.
ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಮತ್ತು ವಿಮಾನಕ್ಕೆ ನೆರವು ನೀಡಲು ಸಿದ್ಧತೆ ಮಾಡಿಕೊಳ್ಳಲಾಯಿತು, ಹಾಗೂ ವಿಮಾನವು ಬೆಳಿಗ್ಗೆ 9:45 ಕ್ಕೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ವಿಮಾನದ ಕ್ಯಾಪ್ಟನ್ ಮತ್ತು ಸಹ-ಪೈಲಟ್ ಇಬ್ಬರೂ ಗಾಯಗೊಂಡಿರುವುದು ಕಂಡುಬಂದಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪ್ರಯಾಣಿಕರ ಟರ್ಮಿನಲ್‌ನಲ್ಲಿ ಪ್ರಯಾಣಿಕರಿಗೆ ಅಗತ್ಯ ಆರೈಕೆಯನ್ನು ಒದಗಿಸಲಾಯಿತು ಮತ್ತು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲು ವಿಮಾನಯಾನ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಲಾಯಿತು.

