ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಗರಿಗೆದರುತ್ತಿದ್ದಂತೆಯೇ, ಪಕ್ಷದೊಳಗಿನ ಆಂತರಿಕ ರಾಜಕಾರಣ ಮತ್ತು ಬಣ ಲೆಕ್ಕಾಚಾರಗಳು ತೀವ್ರ ಕುತೂಹಲ ಮೂಡಿಸಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರು ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್(BK Hariprasad) ಅವರು ನಾಲ್ವರು ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವನೆಯ ಪಟ್ಟಿಯೊಂದಿಗೆ ದೆಹಲಿಗೆ(Delhi) ತೆರಳಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೂವರು ಮಾಜಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಪಟ್ಟಿಯನ್ನು ಹಿಡಿದುಕೊಂಡು ಬಿ.ಕೆ. ಹರಿಪ್ರಸಾದ್ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ. ಮೇಲ್ನೋಟಕ್ಕೆ ಇದು ಪಕ್ಷ ಸಂಘಟನೆಯ ಸಾಮಾನ್ಯ ಪ್ರಕ್ರಿಯೆಯಂತೆ ಕಂಡರೂ, ಇದರ ಹಿಂದೆ ಆಳವಾದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಹಿಳಾ ಕೋಟಾದಡಿ ತಮ್ಮ ಆಪ್ತರಾದ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರನ್ನು ಮತ್ತೆ ಸಚಿವರನ್ನಾಗಿಸಲು ಸಿಎಂ ಡಿ.ಕೆ. ಶಿವಕುಮಾರ್ ಒಲವು ತೋರಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಬಳ್ಳಾರಿ ಭಾಗದ ಶಾಸಕಿ ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಸಚಿವೆಯಾಗಿದ್ದು, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ರಾಜ್ಯದ ಪ್ರಬಲ ಸಮುದಾಯವೊಂದನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಬರುತ್ತದೆ ಎಂಬ ಪ್ರಬಲ ವಾದವನ್ನು ಸಿದ್ದರಾಮಯ್ಯ ಬಣ ಮುಂದಿಟ್ಟಿದೆ.
ಒಂದು ವೇಳೆ ಈ ವಾದಕ್ಕೆ ಮನ್ನಣೆ ನೀಡಿ, “ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳಿ” ಎಂದು ಹೈಕಮಾಂಡ್ ಸೂಚನೆ ನೀಡಿದರೆ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾರ್ಯಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ಸಿಕ್ಕರೆ, ಸಹಜವಾಗಿಯೇ ಮಹಿಳಾ ಕೋಟಾದಡಿ ಸಚಿವ ಸ್ಥಾನದ ರೇಸ್ನಿಂದ ಅವರು ಹೊರಗುಳಿಯಬೇಕಾಗುತ್ತದೆ. ಆಗ ಸಿದ್ದರಾಮಯ್ಯ ಬಣ ಬೆಂಬಲಿಸುತ್ತಿರುವ ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನದ ಹಾದಿ ಸುಗಮವಾಗಲಿದೆ. ಒಟ್ಟಾರೆಯಾಗಿ ಸಂಪುಟ ವಿಸ್ತರಣೆಯ ಆರಂಭಿಕ ಹಂತದಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಅವರ ಲೆಕ್ಕಾಚಾರಗಳಿಗೆ ‘ಪಕ್ಷ ಸಂಘಟನೆ’ಯ ಹೆಸರಿನಲ್ಲಿ ಎದುರಾಳಿ ಬಣವು ಚೆಕ್ಮೇಟ್ ನೀಡಲು ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಈ ಹಿಂದೆ ಡಿಕೆಶಿ ಬೆಳಗಾವಿ ಅಧಿವೇಶನಕ್ಕೂ ಮೊದಲು ಮಹಿಳಾ ಇಲಾಖೆಗೆ ಮಂತ್ರಿ ಸಿಗಲಿದ್ದಾರೆ ಎಂದು ಪ್ರಕಟಿಸಿದ್ದರು. ಬೆಳಗಾವಿ ಚಳಿಗಾಲದ ಅಧಿವೇಶನ ಡಿ.2 ರಿಂದ ಡಿ.11 ವರೆಗೆ ನಡೆಯಲಿದೆ. ಈ ಕಾರಣಕ್ಕೆಮುಂದಿನ 10 ದಿನದ ಒಳಗಡೆ ಯಾರಿಗೆ ಖಾತೆ ಹಂಚಿಕೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
