ಕಾರವಾರ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ, ಜೈಲಿಗೆ ಹೋಗೋನೇ ಬೇರೆ ಎಂದು ಬಿಜೆಪಿ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದ್ದಾರೆ.
ಕಾರವಾರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಹೈಕಮಾಂಡ್‌ನ ಶಿಸ್ತು ಸಮಿತಿಯಿಂದ ನೋಟಿಸ್ ಬಂದ ಕುರಿತು ಮಾತನಾಡಿದ ಅವರು, ನನಗೆ ನೋಟಿಸ್ ನಿನ್ನೆ ರಾತ್ರಿ ತಲುಪಿದೆ. ಅವರು ಏನು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಸೂಕ್ತವಾದ ಉತ್ತರವನ್ನು ಅವರು ನಿಗದಿ ಮಾಡಿದ ಸಮಯದಲ್ಲೇ ಕಳುಹಿಸಬೇಕಾದ ಜಾಗದಲ್ಲಿ ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಅಪರಾಧ ಮಾಡಿಲ್ಲ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅವರ ಪರವಾಗಿ ಮಾಡದೇ ಇರಬಹುದು. ಅದಕ್ಕೆ ಅದರದ್ದೇ ಆದ ಕಾರಣವಿದೆ. ನಾವು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ. ನಾವು ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ನನಗೆ ಆದ ಅನ್ಯಾಯದ ಕುರಿತು ಪತ್ರದ ಮುಖೇನ ತಿಳಿಸಿದ್ದೇನೆ ಎಂದಿದ್ದಾರೆ.
ಅವೆಲ್ಲಾ ನೋವುಗಳೇ, ಇಂತಹ ಪರಿಸ್ಥಿತಿಗೆ ಕಾರಣವಾಗಿವೆ. ಯಾರು ಇದೆಕ್ಕೆಲ್ಲ ಪ್ರಚೋದನೆ ಕೊಟ್ಟರೋ, ಯಾರನ್ನು ಉಳಿಸಲು ಮಾತನಾಡಿದ ನಾಯಕರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಪಕ್ಷದ ಅಧ್ಯಕ್ಷ, ಮಹಾ ನಾಯಕರನ್ನು ವಾಚಾನುಗೋಚರವಾಗಿ ಬೈದರೋ ಅವರ ವಿರುದ್ಧ ಕ್ರಮ ಆಗಿಲ್ಲ. ರೇಣುಕಾಚಾರ್ಯ ಯಾರನ್ನೋ ಗೌರವಿಸಬೇಕು,ಯಾರನ್ನೋ ಬದುಕಿಸಬೇಕು ಎಂದು ರಸ್ತೆ ಮೇಲೆ ಬಿದ್ದು ಹೊಯ್ದಾಡಿದ ಅವರ ಬಗ್ಗೆ ಯಾರೂ ಏನು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ, ಜೈಲಿಗೆ ಹೋಗೋನೇ ಬೇರೆ. ಅವರು ಜಿಲೇಬಿ ತಿಂತಾನೆ ಇದ್ದಾರೆ. ಇವರೆಲ್ಲಾ ಜೈಲಿಗೆ ಹೋಗುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.