– ಮಚ್ಚಿನಿಂದ ದಾಳಿ ನಡೆಸುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರು: ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿ ತವರು ಸೇರಿದ್ದಕ್ಕೆ ಕೋಪಗೊಂಡು ಅತ್ತೆ, ಮಾವನ ಮೇಲೆ ಅಳಿಯ ಮಚ್ಚಿನಿಂದ ದಾಳಿ ಮಾಡಿದ ಘಟನೆ ಕುಂಬಳಗೂಡು (Kumbalgodu) ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಸೈಯದ್ ಅಹ್ಮದ್ (55) ಹಾಗೂ ನಸ್ರಿನಾ ಭಾನು (48) ಅಳಿಯನಿಂದ ಹಲ್ಲೆಗೊಳಗಾದವರು. ಅಳಿಯ ಫರ್ಹಾನ್ ಮುಬರಾಕ್ ಹಲ್ಲೆ ನಡೆಸಿದ ಆರೋಪಿ. ಮುಬಾರಕ್ 15ಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದು, ಅತ್ತೆ ಹಾಗೂ ಮಾವನ ಕೈ, ಕಾಲು, ತಲೆ, ಭುಜ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಬಕ್ರೀದ್ ಹಬ್ಬದ ದಿನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾಳಿಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ಹತ್ಯೆ – ಜೊತೆಗಿದ್ದ ಸ್ನೇಹಿತನೇ ಗುಂಡಿಕ್ಕಿದ
ಫರ್ಹಾನ್ ಮುಬಾರಕ್ ಐದು ವರ್ಷದ ಹಿಂದೆ ಸೈಯದ್ ಅಹ್ಮದ್ ಅವರ ಮಗಳ ಜೊತೆ ವಿವಾಹವಾಗಿದ್ದ. ಮದ್ವೆಯಾದ ಮೂರೇ ತಿಂಗಳಿಗೆ ಜೋಡಿ ಬೇರಾಗಿದ್ದರು. ನಾಲ್ಕು ತಿಂಗಳ ಹಿಂದೆ ಡಿವೋರ್ಸ್‌ಗೆ ಮಹಿಳೆ ಅರ್ಜಿ ಹಾಕಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಹೆಂಡತಿ ಮೇಲೆ ದಾಳಿ ಮಾಡಲು ಬಂದಿದ್ದ. ಆದರೆ ಆಕೆ ಮನೆಯಲ್ಲಿ ಇರಲಿಲ್ಲ. ಈ ವೇಳೆ ಅತ್ತೆ, ಮಾವನ ಮೇಲೆ ದಾಳಿ ಮಾಡಿದ್ದಾನೆ. ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿ ಫರ್ಹಾನ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಕ್ರೀದ್ ದಿನ ವಿದ್ಯಾರ್ಥಿಯ ಹತ್ಯೆ – ಸೂರ್ಯನನ್ನು ಕೊಲೆಗೈದ ಅಸಾದ್ ಎನ್‌ಕೌಂಟರ್‌ಗೆ ಬಲಿ
