ಲಕ್ನೋ: ಗಾಜಿಯಾಬಾದ್‌ನಲ್ಲಿ (Ghaziabad) ವಿದ್ಯಾರ್ಥಿಯೊಬ್ಬನನ್ನು (Student) ಕೊಲೆಗೈದ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿಗೆ (Encounter) ಬಲಿಯಾಗಿದ್ದಾನೆ.
ಖೋಡಾದ ನವನೀತ್ ವಿಹಾರ್ ಕಾಲೋನಿಯ ನಿವಾಸಿಯ ಸೂರ್ಯನನ್ನು ಕೊಲೆಗೈದ ಬಳಿಕ ಆರೋಪಿ ಅಸಾದ್ ತಲೆಮರೆಸಿಕೊಂಡಿದ್ದ. ಇಂದು ಇಂದಿರಾಪುರದ ಅಭಯ್ ಖಂಡ್ ಪ್ರದೇಶದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.
ಮೇ 28ರಂದು ನಡೆದ ಜಗಳದಲ್ಲಿ ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಇರಿಯಲಾಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದ. ಇದನ್ನೂ ಓದಿ: ಅಂಕೋಲ ಮೂಲದ ಮೀನುಗಾರಿಕಾ ಬೋಟ್ ಮುಳುಗಡೆ – ಏಳು ಜನರ ರಕ್ಷಣೆ
ಕುಟುಂಬದವರ ದೂರಿನ ಮೇಲೆ ಐದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಐದು ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆದಿದೆ ಎಂದು ಉಪಪೊಲೀಸ್ ಆಯುಕ್ತ ಧವಲ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಎನ್‌ಕೌಂಟರ್ ನಡೆದಿದ್ದು ಹೇಗೆ?
ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಅಸಾದ್ ಸಹಚರರೊಂದಿಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾನೆ ಎಂದು ಸುಳಿವು ಸಿಕ್ಕಿತ್ತು. ಮಾಹಿತಿ ಆಧರಿಸಿ ಪೊಲೀಸರು ಹಲವೆಡೆ ಚೆಕ್‌ಪೋಸ್ಟ್ ಹಾಕಿ ಆರೋಪಿಗೆ ಬಲೆ ಬೀಸಿದ್ದರು. ಈ ವೇಳೆ ಅಸಾದ್ ಮತ್ತು ಅವನ ಸಹಚರರು ಬೈಕ್‌ನಲ್ಲಿ ಹೋಗುವಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಬೈಕ್ ನಿಲ್ಲಿಸಿ ಪೊಲೀಸರು ಅವರನ್ನು ತಡೆಯಲು ಮುಂದಾದ ವೇಳೆ ಅಸಾದ್ ಪೊಲೀಸರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ.
ಇತ್ತ ಪೊಲೀಸರು ಕೂಡ ತಮ್ಮ ಆತ್ಮರಕ್ಷಣೆಗೆ ಅಸಾದ್ ಹಾಗೂ ಅವನ ಸಹಚರರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅಸಾದ್ ದೇಹಕ್ಕೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕೂಡ ಗಾಯಗೊಂಡಿದ್ದು, ಅವರಿಗೂ ಕೂಡ ಆಸ್ಪತ್ರೆಯಲ್ಲಿ ಚಕಿತ್ಸೆ ಮುಂದುವರೆದಿದೆ.
ಸೂರ್ಯನ ಮನೆಯವರು ಹೇಳಿದ್ದೇನು?
ಮೇ 28ರ ಮಧ್ಯಾಹ್ನ ಸೂರ್ಯನಿಗೆ ಅವನ ಸ್ನೇಹಿತರು ಫೋನ್ ಕರೆ ಮಾಡಿಈದ್ ಆಚರಿಸುವುದಕ್ಕೆ ಕರೆದಿದ್ದರು. ಅವನಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಒತ್ತಾಯ ಮಾಡಿ ಅವನನ್ನು ಕರೆಸಿಕೊಂಡರು. ಆಗ ಜೋರು ಜಗಳ ನಡೆದಿದ್ದು ಸೂರ್ಯನ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಈ ವೇಳೆ ಸೂರ್ಯ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ದುಷ್ಕರ್ಮಿಗಳು ಅವನನ್ನು ಬೆನ್ನಟ್ಟಿ ಚಾಕುಗಳಿಂದ ಹಲ್ಲೆ ಮಾಡಿದ್ದ ಕಾರಣ ಸೂರ್ಯ ಗಂಭೀರ ಗಾಯಕ್ಕೆ ತುತ್ತಾಗಿದ್ದ ಎಂದು ತಿಳಿಸಿದ್ದಾರೆ.
ನನ್ನ ಮಗನನ್ನು ಕೊಂದಂತೆಯೇ ನನ್ನ ಮಗನ ಕೊಲೆಗಾರರನ್ನು ಕೊಲ್ಲಬೇಕು. ನಮಗೆ ನ್ಯಾಯ ಸಿಗಬೇಕು. ಆ ಏಳು ಜನರನ್ನು ಕೊಲ್ಲಬೇಕು ಮತ್ತು ಅವರ ನಿವಾಸಗಳ ಮೇಲೆ ಬುಲ್ಡೋಜರ್ ನುಗ್ಗಿಸಿ ಧ್ವಂಸ ಮಾಡಬೇಕು ಎಂದು ಸೂರ್ಯನ ತಾಯಿ ಸರೋಜ ಹೇಳಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಸೂರ್ಯನ ಸ್ನೇಹಿತರಾಗಿದ್ದರು. ಅಸಾದ್ ಬಳಸಿದ್ದ ಬೈಕ್ ಹಾಗೂ ಗುಂಡು ಹಾರಿಸಲು ಬಳಸಿದ್ದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಶರು ಹೇಳಿದ್ದಾರೆ. ಬೈಕ್ ಓಡಿಸುವ ವಿಚಾರಕ್ಕೆ ಜಗಳ ನಡೆದು, ಅದು ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಒಬ್ಬ ಆರೋಪಿ ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ಯಾರಾ ಅಥ್ಲೀಟ್ ಹತ್ಯೆ – ಜೊತೆಗಿದ್ದ ಸ್ನೇಹಿತನೇ ಗುಂಡಿಕ್ಕಿದ
