– ಯಮಸ್ವರೂಪಿ ಕಂಟೇನರ್ ಲಾರಿ ಡಿಕ್ಕಿಗೆ ಜೋಡಿ ದುರಂತ ಅಂತ್ಯ

ಚಿಕ್ಕಬಳ್ಳಾಪುರ: ಇಶಾ ಆದಿಯೋಗಿ ದರ್ಶನ ಪಡೆದು ವಾಪಸ್ ಆಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕ-ಯುವತಿ ದಾರುಣ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura Accident) ತಾಲೂಕಿನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶ ನೋಂದಣಿಯ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್‌ನಲ್ಲಿ ಯುವಕ-ಯುವತಿ ಇಶಾ ಆದಿಯೋಗಿ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ಲಿಂಗಶೆಟ್ಟಿಪುರ ಗ್ರಾಮದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಬೈಕ್‌ನಲ್ಲಿ ಪ್ರವೇಶಿಸಿದ್ದಾರೆ. ಅದೇ ವೇಳೆಗೆ ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ವಿಆರ್‌ಎಲ್ ಕಂಟೇನರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಲಾರಿಯ ಮುಂಭಾಗದಲ್ಲಿ ಸಿಲುಕಿಕೊಂಡಿದೆ. ಬೈಕ್ ಸವಾರ ಅಮನ್ ದೇವ್ ಮಿಶ್ರಾ ಮೇಲೆಯೇ ಲಾರಿಯ ಚಕ್ರಗಳು ಹರಿದಿವೆ. ಯುವತಿಯ ಮೇಲೂ ಲಾರಿ ಹರಿದಿದೆ. ಕ್ಷಣಮಾತ್ರದಲ್ಲಿ ಇಬ್ಬರು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಧಾರವಾಡ | ಅಪಾರ್ಟ್‌ಮೆಂಟ್ ಮನೆ ಬೀಗ ಮುರಿದು 1.55 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳವು
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಿದ ಬಳಿಕ ಇಬ್ಬರ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ವಾಹನದ ನಂಬರ್ ಆಧರಿಸಿ ಮೃತ ಬೈಕ್ ಸವಾರನನ್ನು ಉತ್ತರ ಪ್ರದೇಶ ಮೂಲದ ಅಮನ್ ದೇವ್ ಮಿಶ್ರಾ ಎಂದು ಗುರುತಿಸಲಾಗಿದೆ. ಆದರೆ ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
