ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Rain Effect) ಸಂಜೆ ವೇಳೆಗೆ ಭಾರೀ ಮಳೆ ಸುರಿದಿದ್ದು, ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಪೀಣ್ಯ-ದಾಸರಹಳ್ಳಿ ಸಮೀಪದ ಭಾರತಿ ಚಿತ್ರಮಂದಿರದಲ್ಲೂ ಮಳೆಯಿಂದಾಗಿ ಅವಘಡ ಸಂಭವಿಸಿದೆ. ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಚಿತ್ರಮಂದಿರದ ಮೇಲ್ಛಾವಣಿಯ ಭಾಗವೊಂದು ಹಠಾತ್ ಕುಸಿದು ಪ್ರೇಕ್ಷಕನ ಮೇಲೆ ಬಿದ್ದಿದೆ. ಪರಿಣಾಮ ಪ್ರೇಕ್ಷಕನ ತಲೆಗೆ ತೀವ್ರ ಪೆಟ್ಟಾಗಿದೆ.
ಅವಘಡ ಸಂಭವಿಸುತ್ತಿದ್ದಂತೆ ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಗಾಯಗೊಂಡ ಪ್ರೇಕ್ಷಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಳೆಯ ಅಬ್ಬರಕ್ಕೆ ಬಳಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಬಳಿ ಮಳೆ ನೀರು ನಿಂತು ಮಿನಿ ಕೆರೆಯಂತಾಗಿದೆ. ವೈಟ್‌ಫೀಲ್ಡ್ ಭಾಗದ ವಿಬ್‌ಗಯಾರ್ ರಸ್ತೆಯಲ್ಲೂ ನೀರು ನಿಂತಿದ್ದು, ರಸ್ತೆಯೇ ಕೆರೆಯಂತಾಗಿದೆ. ನೀರು ನಿಂತ ಪರಿಣಾಮ ಕೆಲವು ವಾಹನಗಳು ಕೆಟ್ಟು ರಸ್ತೆಯಲ್ಲೇ ನಿಲ್ಲುವಂತಾಗಿದೆ.
ಸಹಕಾರ ನಗರದಲ್ಲೂ ಮಳೆ ನೀರು ರಸ್ತೆಯಲ್ಲಿ ನಿಂತಿದೆ. ಮೋರಿ ಬ್ಲಾಕ್ ಆಗಿರುವ ಪರಿಣಾಮ ರಸ್ತೆಯಲ್ಲಿ ನೀರೋ ನೀರು ಎಂಬಂತಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ಹಲವೆಡೆ ಸಂಚಾರ ನಿಧಾನಗೊಂಡಿದ್ದು, ಕೆಲವೆಡೆ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಜಾಮ್ ಉಂಟಾಗಿದೆ.ಇದನ್ನೂ ಓದಿ: ಬಳ್ಳಾರಿ ಚಲೋ ಪ್ರೇರಣೆಯಿಂದಲೇ ಕಾಂಗ್ರೆಸ್ ಪಾದಯಾತ್ರೆ: ವಿಜಯೇಂದ್ರ
ಇನ್ನು ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹಾಗೂ ಭಾರೀ ಮಳೆಯ ಸಂದರ್ಭದಲ್ಲಿ ಅನಗತ್ಯ ಪ್ರಯಾಣ ತಪ್ಪಿಸುವಂತೆ ಸೂಚಿಸಿದ್ದಾರೆ.
ನಗರದ ಟ್ರಾಫಿಕ್ ಸ್ಥಿತಿಗತಿ ತಿಳಿದುಕೊಳ್ಳಲು ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಸಂಚಾರ ಪೊಲೀಸರ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆಯುವಂತೆ ಪೊಲೀಸರು ಸಲಹೆ ನೀಡಿದ್ದಾರೆ.ಇದನ್ನೂ ಓದಿ: ಪತ್ನಿ ಜೊತೆ ಗಲಾಟೆ – ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ ರೋಗಿ

