ಉಡುಪಿ: ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆ (KMC) ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರಾಜೇಶ್ ಆರ್. ಶೆಟ್ಟಿ ಗಾಯಗೊಂಡ ದುರ್ದೈವಿ. ಕೆಲ ದಿನಗಳ ಹಿಂದೆ ಪತ್ನಿ ಜೊತೆ ಜಗಳವಾಡಿ ವಿಷ ಕುಡಿದಿದ್ದ ರಾಜೇಶ್ ತೀವ್ರ ಅಸ್ವಸ್ಥಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ರಾಜೇಶ್ನನ್ನು ಮಣಿಪಾಲದ(Manipal) ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ (ICU) ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಚಿಕಿತ್ಸೆಯಿಂದ ಚೇತರಿಸಿಕೊಂಡು ಆತ ಡಿಸ್ಚಾರ್ಜ್ ಆಗಬೇಕಿತ್ತು. ಇಂದು ಆಸ್ಪತ್ರೆ ಸಿಬ್ಬಂದಿ ಜೊತೆ ವಾಕಿಂಗ್ ಹೋಗುತ್ತೇನೆ ಎಂದು ಹೇಳಿ ರೂಮಿನಿಂದ ಹೊರ ಬಂದಿದ್ದ ರಾಜೇಶ್ ಏಕಾಏಕಿ ಕಿಟಕಿಯಿಂದ ಜಿಗಿದಿದ್ದಾನೆ. ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಜಾಲರಿಯನ್ನು (ನೆಟ್) ಹರಿದು ಹೊರಬಂದ ರಾಜೇಶ್ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ.
ನಾಲ್ಕನೇ ಮಹಡಿಯಿಂದ ಬಿದ್ದ ರಭಸಕ್ಕೆ ರಾಜೇಶ್ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಅವರನ್ನು ರಕ್ಷಿಸಿ ತುರ್ತು ಚಿಕಿತ್ಸಾ ವಿಭಾಗಕ್ಕೆ ರವಾನಿಸಿದ್ದಾರೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು, ಅದೇ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ.

