ನವದೆಹಲಿ: UGC NET ಪ್ರಶ್ನೆಪತ್ರಿಕೆಯಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆ 3 ಪತ್ರಿಕೆಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಿಸಿದೆ.

ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳನ್ನು ಮರುನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ. ಜೂನ್ 22ರಿಂದ 30ರವರೆಗೆ ಹಾಗೂ ಜುಲೈ 5ರಂದು ಒಟ್ಟು 87 ವಿಷಯಗಳಲ್ಲಿ ಪರೀಕ್ಷೆಯನ್ನು NTA ನಡೆಸಿತ್ತು. ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಮತ್ತು ಪಿಎಚ್‌ಡಿ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗಿತ್ತು.
ಆದರೆ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷಗಳಿವೆ ಎಂದು ಅಭ್ಯರ್ಥಿಗಳಿಂದ NTAಗೆ ಹಲವಾರು ದೂರುಗಳು ಬಂದಿದ್ದವು.
ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ NTA, ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ದೂರುಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿದ ಬಳಿಕ, ಈ ಮೂರು ವಿಷಯಗಳ ಪರೀಕ್ಷೆಯನ್ನು ಮರುನಡೆಸುವ ನಿರ್ಧಾರ ಕೈಗೊಂಡಿದೆ.
ಮರುಪರೀಕ್ಷೆ ಯಾವಾಗ?
ಇಂಗ್ಲಿಷ್: ಸೆಪ್ಟೆಂಬರ್ 9 (ಶಿಫ್ಟ್ 1) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ವಾಣಿಜ್ಯ: ಸೆಪ್ಟೆಂಬರ್ 9 (ಶಿಫ್ಟ್ 2) ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ
ಸಮಾಜಶಾಸ್ತ್ರ: ಸೆಪ್ಟೆಂಬರ್ 10 (ಶಿಫ್ಟ್ 1) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
