– ಕಂಪನಿಯ ಆಡಳಿತ ಮಂಡಳಿಯ ಮುಂದೆ ತಪ್ಪೊಪ್ಪಿಕೆ
– ಎರಡಕ್ಕಿಂತಲೂ ಹೆಚ್ಚು ಮಂದಿ ಜೊತೆ ವಿವಾಹೇತರ ಸಂಬಂಧ
ವಾಷಿಂಗ್ಟನ್: ಚಿಪ್ ತಯಾರಿಕಾ ದೈತ್ಯ ಎನ್ವಿಡಿಯಾ (Nvidia) ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಜೆನ್ಸನ್ ಹುವಾಂಗ್(Jensen Huang) ಅವರು ಸೋಮವಾರ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಮರುನೇಮಕಗೊಳ್ಳುವ ಮುನ್ನ ಅವರು ಕಂಪನಿಯ ಆಡಳಿತ ಮಂಡಳಿಯ (Board of Directors) ಮುಂದೆ ತಮ್ಮ ಮತ್ತಷ್ಟು ವಿವಾಹೇತರ ಸಂಬಂಧಗಳ ಕುರಿತು ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿ ಮಾಡಿದೆ.
ಚೀನಾದ ಗುಪ್ತಚರ ಇಲಾಖೆಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಶಂಕೆಗೆ ಒಳಗಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧದ ತನಿಖೆಯ ಹಿನ್ನೆಲೆಯಲ್ಲಿ ಜೆನ್ಸನ್ ಹುವಾಂಗ್ 11 ದಿನಗಳ ಹಿಂದೆ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಹುವಾಂಗ್ ಅವರಿಗೆ ನೇರವಾಗಿ ವರದಿ ಮಾಡಿಕೊಳ್ಳುತ್ತಿದ್ದ ಎನ್ವಿಡಿಯಾ ಕಾರ್ಯನಿರ್ವಾಹಕಿ ಕಿಂಬರ್ಲಿ ಪೊವೆಲ್ ಸೇರಿದಂತೆ ಇತರರೊಂದಿಗಿನ ಸಂಬಂಧಗಳ ವರದಿಗಳೂ ಹೊರಬಿದ್ದಿದ್ದವು.
ಭಾನುವಾರ ನಡೆದ ಎನ್ವಿಡಿಯಾ ಆಡಳಿತ ಮಂಡಳಿಯ ಸುದೀರ್ಘ ಸಭೆಯಲ್ಲಿ ಭಾಗವಹಿಸಿದ್ದ ಜೆನ್ಸನ್ ಹುವಾಂಗ್, ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವ ಎರಡು ಸಂಬಂಧಗಳಿಗಿಂತಲೂ ಹೆಚ್ಚಿನ ವಿವಾಹೇತರ ಸಂಬಂಧಗಳ ಬಗ್ಗೆ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ತಮ್ಮ ನಡವಳಿಕೆಯ ಬಗ್ಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತ ಜೆನ್ಸನ್ ಅವರು ತಮ್ಮ ಪತ್ನಿ ಲೋರಿ ಹುವಾಂಗ್ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ʻಜೇನʼಬಲೆಗೆ ಬಿದ್ದ ಜೆನ್ಸನ್ಗೆ ಮತ್ತೆ ಎನ್ವಿಡಿಯಾ ಸಿಇಒ ಹುದ್ದೆ – ಕಚೇರಿಗೆ ಮರಳಿದ ಹುವಾಂಗ್ಗೆ ಭರ್ಜರಿ ಸ್ವಾಗತ!
ಹುವಾಂಗ್ ಅವರ ಮರುನೇಮಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಕ್ರಿಯವಾಗಿ ಬೆಂಬಲಿಸಿದ್ದಾರೆ. ಎನ್ವಿಡಿಯಾ ಮುಖ್ಯಸ್ಥರು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ಆಡಳಿತಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದಿರುವ ಟ್ರಂಪ್, ಹುವಾಂಗ್ ಅವರು ಬೇರೆ ವಿಷಯಗಳಲ್ಲಿ ಕೆಲವು ಅಚಾತುರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆಲಿಸ್ ಅವರೊಂದಿಗಿನ ಸಂಬಂಧದಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ. ಇದೇ ವೇಳೆ, ಆಲಿಸ್ ಕಾರ್ಯನಿರ್ವಾಹಕಿಯಾಗಿದ್ದ ಮೆಗಾಸ್ಪೀಡ್ (Megaspeed) ಸೇರಿದಂತೆ ಹಲವು ಕಂಪನಿಗಳನ್ನು ಅಮೆರಿಕದ ವಾಣಿಜ್ಯ ಇಲಾಖೆಯು ಸೋಮವಾರ ಕಪ್ಪುಪಟ್ಟಿಗೆ (Trade Blacklist) ಸೇರಿಸಿದ್ದು, ಅಮೆರಿಕದ ಚಿಪ್ ಮತ್ತು ತಂತ್ರಜ್ಞಾನಗಳ ಬಳಕೆಗೆ ನಿರ್ಬಂಧ ಹೇರಿದೆ. ಮೆಗಾಸ್ಪೀಡ್ ಕಂಪನಿಯು ಖರೀದಿಸಿದ ಅತ್ಯಾಧುನಿಕ ಎನ್ವಿಡಿಯಾ ಚಿಪ್ಗಳನ್ನು ಚೀನಾಕ್ಕೆ ರವಾನಿಸಲಾಗಿದೆ ಎಂಬ ಅನುಮಾನದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
