ಚಾಮರಾಜನಗರ: ಚಾಮರಾಜನಗರ (Chamarajanagar) ಜಿಲ್ಲೆಯ ಚುನಾವಣಾ (Election) ಫಲಿತಾಂಶ (Result) ಪ್ರಕಟಗೊಂಡಿದೆ. ಈ ಬಾರಿ ಹಾಲಿ ಶಾಸಕರು ಸೋಲನಭವಿಸಿದ್ದು, 4 ಕ್ಷೇತ್ರದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್ (Congress) 1 ಕ್ಷೇತ್ರದಲ್ಲಿ ಜೆಡಿಎಸ್ (JDS) ಗೆಲುವು ಸಾಧಿಸಿದ್ದಾರೆ. ಬಿಜೆಪಿ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ.
ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿತ್ತು. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿತ್ತು. ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯಾದ ಹಾಲಿ ಶಾಸಕ ಪುಟ್ಟರಂಗಶೆಟ್ಟಿ ಈ ಬಾರಿಯು ಭರ್ಜರಿ ಜಯ ಸಾಧಿಸಿದ್ದಾರೆ. ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಹೀನಾಯವಾಗಿ ಪರಾಭವಗೊಂಡರು. ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ, ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಸ್ವಾಮಿ ಸ್ಪರ್ಧಿಸಿದ್ದರು.
ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರಾ ಹಣಾಹಣಿಯಿತ್ತು. ಮೊದಲಿನಿಂದಲೂ ಕೂಡ ಕ್ಷೇತ್ರದಲ್ಲಿ ವ್ಯಕ್ತಿ ಆಧಾರಿತವಾಗಿಯೇ ಚುನಾವಣೆ ನಡೆದಿತ್ತು. ಕೊನೆಗೂ ಬಿಜೆಪಿ ಅಭ್ಯರ್ಥಿಯಾದ ಹಾಲಿ ಶಾಸಕ ನಿರಂಜನ್ ಕುಮಾರ್ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಣೇಶ್ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಗುಂಡ್ಲಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿರಂಜನ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಗಣೇಶ್ ಪ್ರಸಾದ್, ಜೆಡಿಎಸ್ ಅಭ್ಯರ್ಥಿಯಾಗಿ ಕಡಬೂರ್ ಮಂಜುನಾಥ್ ಸ್ಪರ್ಧಿಸಿದ್ದರು.
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕೊಳ್ಳೇಗಾಲ. ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರಾ ಹಣಾಹಣಿಯಿತ್ತು. ಬಿಎಸ್‍ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿರುವ ಎನ್.ಮಹೇಶ್ ವಿರುದ್ಧ ವಿರೋಧಿ ಬಣಗಳು ಒಂದಾಗಿದ್ದು, ಸೋಲಿಸುವ ಹಠ ತೊಟ್ಟಿದ್ದರು. ಕೊನೆಗೂ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕರಾದ ಎನ್ ಮಹೇಶ್ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಾರೆ. ಎನ್ ಮಹೇಶ್ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊಳ್ಳೇಗಾಲದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ, ಜೆಡಿಎಸ್ ಅಭ್ಯರ್ಥಿಯಾಗಿ ಪುಟ್ಟಸ್ವಾಮಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಜಯ
ಹನೂರು: ಹನೂರು ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನಲ್ಲಿ ಎರಡು ಮನೆತನಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಆದರೆ ಎರಡು ಮನೆತನಗಳ ಫೈಟ್ ನಡುವೆಯೇ ಈಗ ಮೂರನೇಯವರ ಎಂಟ್ರಿಯಾಗಿತ್ತು. ಇದೀಗ ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೂ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿಯಾಗಿ ನರೇಂದ್ರ ಅವರನ್ನು ಸೋಲಿಸಿ ಜೆಡಿಎಸ್ ಅಭ್ಯರ್ಥಿಯಾಗಿ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತನ್ ನಾಗಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ನರೇಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಮಂಜುನಾಥ್ ಸ್ಪರ್ಧಿಸಿದ್ದರು. ಇದನ್ನೂ ಓದಿ: ರಮೇಶ್ ಕುಮಾರ್‌ಗೆ ಸೋಲು – ಕೋಲಾರದ ಜಿಲ್ಲೆಯಲ್ಲಿ ಗೆದ್ದವರ‍್ಯಾರು, ಸೋತವರ‍್ಯಾರು?