‘ಪರಿಮಳಾ ಡಿಸೋಜಾ’ (Parima D’Souza) ಚಿತ್ರದ ಕಂದ ಕಂದ ಎಂಬ ಹಾಡು (Song) ಸಾಂಸ್ಕೃತಿಕ ನಗರಿ ಮೈಸೂರಿನ ಡಿ ಆರ್ ಸಿ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ವಿ.ನಾಗೇಂದ್ರಪ್ರಾಸಾದ್ (Nagendra Prasad) ಬರೆದಿರುವ ಈ ಹಾಡನ್ನು ಅನುರಾಧಾ ಭಟ್ (Anuradha Bhatt) ಸುಶ್ರಾವ್ಯವಾಗಿ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ವಿಜೃಂಭಣೆಯಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಗಣ್ಯ ವ್ಯಕ್ತಿಗಳಿಗೆ ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಮಾನ್ಯ ಶಾಸಕರಾದ ಜಿ.ಟಿ ದೇವೇಗೌಡ ಹಾಗೂ ಮೈಸೂರಿನ ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಬಿ.ಎನ್ ಗಿರೀಶ್ ಖ್ಯಾತ ಕನ್ನಡ ಚಲನಚಿತ್ರ ತಾರೆ ಭವ್ಯ ಮುಂತಾದ ಗಣ್ಯರು ಸೇರಿ ಈ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿಂದೆ ಮೈಸೂರಿನ ಉಸ್ತುವಾರಿ ಮಂತ್ರಿಯಾಗಿದ್ದಾಗ, ಪುನೀತ್ ರಾಜ್‌ಕುಮಾರ್ ಮೈಸೂರಿನಲ್ಲಿ ಆಫೀಸ್ ಮಾಡಲು ನನ್ನನು ಭೇಟಿ ಆಗಿದ್ದರು. ಆಗ ಎಷ್ಟು ಹೇಳಿದರು ನಮ್ಮ ಮುಂದೆ ಕುಳಿತುಕೊಳ್ಳದೆ, ನಿಂತುಕೊಂಡೆ ಮಾತನಾಡಿದ್ದು, ಪುನೀತ್ ಅವರು ಹಿರಿಯರಿಗೆ ಕೊಡುತ್ತಿದ್ದ ಗೌರವಕ್ಕೆ ಸಾಕ್ಷಿ ಎಂದು
ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡರು. ‘ಪರಿಮಳಾ ಡಿಸೋಜಾ’ ಚಿತ್ರಕ್ಕೂ ಶಾಸಕರು ಶುಭ ಕೋರಿದರು. ನಟಿ ಭವ್ಯ ಅವರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಜೊತೆ ಅಭಿನಯಿಸಿದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ಆನಂತರ ‘ಪರಿಮಳಾ ಡಿಸೋಜಾ’ ಚಿತ್ರದ ತಮ್ಮ ಪಾತ್ರದ ಕುರಿತು ಮಾತನಾಡಿದರು.
ಭವ್ಯ, ಶ್ರೀನಿವಾಸ್ ಪ್ರಭು, ಕೋಮಲ ಬನವಾಸೆ, ಪೂಜಾ ರಾಮಚಂದ್ರ, ಸುನೀಲ್ ಎ ಮೋಹಿತೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾಧ್ಯ, ಮೀಸೆ ಆಂಜನಪ್ಪ, ಜಯರಾಮಣ್ಣ, ಜ್ಯೋತಿ ಮರೂರು, ಉಗ್ರಂ ರೆಡ್ಡಿ, ರೋಹಿಣಿ ಜಗನ್ನಾಥ್, ಚಂದನ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.